ಕ್ಯಾನ್ಬೆರಾ : ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಬಾಂಗ್ಲಾದೇಶ 105 ರನ್ಗಳ ಗೆಲವು ಸಾಧಿಸಿದೆ.
ಬಾಂಗ್ಲಾದೇಶ ನೀಡಿದ 268 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಅ ಫ್ಘಾನಿಸ್ತಾನ ತಂಡ 43 ಓವರ್‌ಗಳಲ್ಲಿ 162 ರನ್ ಗಳಿಸಿ ಆಲೌಟಾಯಿತು. ಈ ಮೂಲಕ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿಜಯಿಯಾಗಿದೆ.
ಪ್ರಸ್ತುತ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯವನ್ನು ಬಾಂಗ್ಲಾ ಕೈಗೊಂಡಿತ್ತು. ಆರಂಭಿಕ ಆಟಗಾರರಾದ ಅನುಮಲ್ ಹಕ್ ಹಾಗೂ ತಮೀಬ್ ಇಕ್ಬಾಲ್ ಉತ್ತಮ ಆಟದ ಮೂಲಕ ರನ್ ಪೇರಿಸುವಲ್ಲಿ ಯಶಸ್ವಿಯಾದರು. ನಂತರ ಮಧ್ಯಕ್ರಮಾಂಕದಲ್ಲಿ ಜೊತೆಗೂಡಿದ ಶಕಿಬ್ ಅಲ್ ಹಸನ್ ಹಾಗೂ ರಹೀಮ್‌ರ ಶತಕ (114)ಜೊತೆಯಾಟದಿಂದ ಬಾಂಗ್ಲಾ ನಿಗದಿತ 50 ಓವರ್‌ಗಳಲ್ಲಿ 267 ರನ್‌ಗಳಿಗೆ ಅಲೌಟಾಯಿತು.
268 ರನ್‌ಗಳ ಸವಾಲಿನ ಗೆಲುವಿನ ಗುರಿ ಬೆನ್ನು ಹತ್ತಿದ ಅಫ್ಘಾನಿಸ್ತಾನ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಮೊತ್ತ 3 ರನ್‌ಗಳಾಗುವಷ್ಟರಲ್ಲಿ ಮೊದಲ 3 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಜಾವೆದ್ ಅಹಮದಿ (1), ಆಫ್ಸರ್ ಜಜೈ (1), ಅಸ್ಗರ್ ಸ್ಪಾನಿಕ್‌ಜಾಯ್ (1) ಅವರನ್ನು ಬಾಂಗ್ಲಾ ಬೌಲರ್‌ಗಳು ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿಸಿದರು.
ನೌರೋಜ್ ಮಂಗಲ್ (27) ಸ್ವಲ್ಪ ಹೊತ್ತು ಕ್ರೀಸಿನಲ್ಲಿ ನಿಲ್ಲುವ ಪ್ರಯತ್ನ ನಡೆಸಿದರೂ ಮಹಮದುಲ್ಲಾ ಕ್ಯಾಚ್ ಮೂಲಕ ಅವರ ವಿಕೆಟ್ ಪಡೆದರು. ಆಫ್ಘಾನಿಸ್ತಾನದ ಬ್ಯಾಟಿಂಗ್ ಭರವಸೆ ಎನಿಸಿರುವ ಸಮೀವುಲ್ಲಾ ಶೆನ್ವರಿ ರನ್ ಔಟ್ ಆಗುವ ಮುನ್ನ 42 ರನ್ ಗಳಿಸಿದರು. ನಾಯಕ ಮಹಮದ್ ನಬಿ (44) ತಂಡಕ್ಕೆ ಅಲ್ಪಸಮಯ ಆಸರೆಯಾದರು.
೪೨.೫ ಓವರ್ ನಲ್ಲಿ ೧೬೨ ರನ್ ಗಳಿಸಿ ಅಫ್ಘಾನ್ ತನ್ನ ಎಲ್ಲ ವಿಕೆಟ್ಗಳನ್ನೂ ಕಳೆದು ಕೊಂಡಿತು.
ಬಾಂಗ್ಲಾ ತಂಡದ ನಾಯಕ ಮುಶ್ರಫೆ ಮೊರ್ತೆಜಾ ಮೂರು ವಿಕೆಟ್ ಕಬಳಿಸಿ ಪಂದ್ಯ ಪುರುಷ ಪ್ರಶಸ್ತಿಗೆ ಅರ್ಹರಾದರು.