ಕ್ರೀಡೆ

ಬಿಎಫ್ ಸಿಗೆ ಮಣಿದ ಮಜಿಯಾ

Srinivasamurthy VN

ಬೆಂಗಳೂರು: ಪಂದ್ಯದ ಅಂತಿಮ ಕ್ಷಣದಲ್ಲಿನ ರೋಚಕ ಹಣಾಹಣಿಯಲ್ಲಿ ನಿಯಂತ್ರಣ ಕಂಡುಕೊಂಡ ಬೆಂಗಳೂರು ಎಫ್ ಸಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್ ಸಿ) ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮಂಗಳವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ, ಮಾಲ್ಡೀವ್ಸ್‍ನ ಮಜಿಯಾ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ
ಗೆಲವು ದಾಖಲಿಸಿತು. ಈ ಮೂಲಕ ಎಎಫ್ ಸಿ ಕಪ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಆತಿಥೇಯ ಬಿಎಫ್ ಸಿ ಗೆಲವು ದಾಖಲಿಸಿದೆ. ಪಂದ್ಯದ ಆರಂಭದಲ್ಲಿ ಉಭಯ ಆಟಗಾರರು ತೀವ್ರ ಹಣಾಹಣಿ ನಡೆಸಿದರಾದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ದ್ವಿತಿಯಾರ್ಧದಲ್ಲಿ ಉಭಯ ಆಟಗಾರರು ಚುರುಕಿನ ಪ್ರದರ್ಶನ ನಡೆಸಿದರು. 67ನೇ ನಿಮಿಷದಲ್ಲಿ ಬಿಎಫ್ ಸಿ ನಾಯಕ ಸುನೀಲ್ ಛೆಟ್ರಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಇನ್ನು ಪಂದ್ಯದ ಅಂತಿಮ ಘಟ್ಟದಲ್ಲಿ 89ನೇ ನಿಮಿಷದಲ್ಲಿ ಉಮೈರ್ ಮಜಿಯಾ ತಂಡಕ್ಕೆ ಗೋಲು ದೊರಕಿಸಿಕೊಟ್ಟರು. ಈ ಮೂಲಕ ಉಭಯ ತಂಡಗಳು ಸಮಬಲ ಸಾಧಿಸಿದವು.
ಪಂದ್ಯ ಇನ್ನೇನು ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಭಾವಿಸುತ್ತಿರುವಾಗ ಬಿಎಫ್ ಸಿ ತಂಡದ ಸ್ಥಳೀಯ ಆಟಗಾರ ಎಸ್.ಶಂಕರ್ 90+3ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಅಚ್ಚರಿಯ ರೀತಿಯಲ್ಲಿ ಗೆಲವು ತಂದುಕೊಟ್ಟರು.

ಈ ಗೆಲವಿನ ಮೂಲಕ ಬೆಂಗಳೂರು ಎಫ್ ಸಿ ಐ-ಲೀಗ್‍ನಲ್ಲಿ ಮೋಹನ್ ಬಗಾನ್ ವಿರುದ್ಧದ ಹಿನಾಯ ಸೋಲಿನ ನಂತರ ಮತ್ತೆ ಗೆಲವಿನ ಲಯಕ್ಕೆ ಮರಳಿದಂತಾಗಿದೆ.

SCROLL FOR NEXT