ವಿಶ್ವಕಪ್: ಯುಎಇ ವಿರುದ್ಧ ಭಾರತಕ್ಕೆ ಗೆಲವು
ನಿರೀಕ್ಷೆಯಂತೆ ಯುಎಇ ವಿರುದ್ಧ ಭಾರತ ಗೆಲವು ಸಾಧಿಸಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿಂದು ಯುಎಇ ತಂಡದ 103 ರನ್ಗಳ ಸವಾಲನ್ನು ಬೆನ್ನತ್ತಿ ಬ್ಯಾಟಿಂಗ್ಗೆ...
ಪರ್ತ್: ನಿರೀಕ್ಷೆಯಂತೆ ಯುಎಇ ವಿರುದ್ಧ ಭಾರತ ಗೆಲವು ಸಾಧಿಸಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿಂದು ಯುಎಇ ತಂಡದ 103 ರನ್ಗಳ ಸವಾಲನ್ನು ಬೆನ್ನತ್ತಿ ಬ್ಯಾಟಿಂಗ್ಗೆ ಇಳಿದ ಭಾರತ 18.5 ಓವರ್ಗಳಲ್ಲಿ ಗುರಿ ತಲುಪುವ ಮೂಲಕ ಗೆಲವು ಸಾಧಿಸಿದೆ.
ಪ್ರಸ್ತುತ ಪಂದ್ಯದಲ್ಲಿ ರೋಹಿತ್ ಶರ್ಮಾ 10 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸುವ ಮೂಲಕ 57 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 33 ರನ್ ಕಲೆಹಾಕಿದ್ದಾರೆ. ಏತನ್ಮಧ್ಯೆ ಯುಎಇಯನ್ನು ಮಣಿಸುವ ಮೂಲಕ ವಿಶ್ವಕಪ್ ಪಂದ್ಯದಲ್ಲಿ ಸತತ ಮೂರನೇ ಬಾರಿ ಟೀಂ ಇಂಡಿಯಾ ವಿಜಯದ ನಗೆ ಬೀರಿದೆ.
ಎದುರಾಳಿ ಯುಎಇ ತಂಡವನ್ನು 37.1 ಓವರ್ನಲ್ಲಿ 102 ರನ್ ಗಳಿಗೆ ಆಲೌಟ್ ಮಾಡಿದ ಭಾರತಕ್ಕೆ ಪ್ರಸ್ತುತ ಪಂದ್ಯ ಜಯಿಸಲು ಕಷ್ಟವಾಗಲಿಲ್ಲ.
ಭಾರತದ ಪರ ಆರಂಭಿಕ ದಾಂಡಿಗರಾಗಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕ್ರೀಸ್ಗಿಳಿದಿದ್ದು, ಏಳನೇ ಓವರ್ನಲ್ಲಿ ಶಿಖರ್ ಧವನ್ (14) ಮೊಹಮ್ಮದ್ ನವೀದ್ ಬಾಲ್ಗೆ ಕ್ಯಾಚಿತ್ತು ಔಟಾದರು.
ಕಳೆದೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲ ಓವರ್ನಲ್ಲೇ ಬೌಂಡರಿ ಬಾರಿಸುವ ಮೂಲಕ ಉತ್ತಮ ಆರಂಭವನ್ನು ಕಂಡುಕೊಂಡರು. ಧವನ್ ನಂತರ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದು ರೋಹಿತ್ ಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರ ಜತೆಯಾಟದಲ್ಲಿ ಭಾರತ 104 ರನ್ ದಾಖಲಿಸಿ, ಗೆಲವು ತಮ್ಮದಾಗಿಸಿಕೊಂಡಿತು.
4 ವಿಕೆಟ್ ಗಳಿಸಿದ ಆರ್ ಅಶ್ವಿನ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.