ಕ್ರೀಡೆ

ಫೆಡರೇಷನ್ ಕಪ್ ಫುಟ್ಬಾಲ್: ಬೆಂಗಳೂರು ಎಫ್‌ಸಿಗೆ ಇಂದು ಪುಣೆ ಸವಾಲು

ವಾಸ್ಕೋ: ಐ-ಲೀಗ್ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ, ಸೋಮವಾರ ನಡೆಯಲಿರುವ ಫೆಡರೇಷನ್ ಕಪ್ ಫುಟ್ಬಾಲ್ ಪಂದ್ಯಾವಳಿಯ 'ಬಿ' ಗುಂಪಿನ ಪಂದ್ಯದಲ್ಲಿ ಪುಣೆ ಎಫ್‌ಸಿ ತಂಡವನ್ನು ಎದುರಿಸುತ್ತಿದೆ.

ಈ ವರೆಗೆ ತಾನು ಆಡಿರುವ ಮೂರು ಪಂದ್ಯಗಳಿಂದ 7 ಅಂಕಗಳನ್ನು ಗಳಿಸಿರುವ ಬೆಂಗಳೂರು ತಂಡ ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪುಣೆ ತಂಡ 4 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ, ಸೋಮವಾರದ ಪಂದ್ಯ ಬೆಂಗಳೂರಿಗಿಂತ ಪುಣೆ ಪಾಲಿಗೆ ಹೆಚ್ಚು ಮಹತ್ವವಾಗಿದೆ.

ಪಂದ್ಯಾವಳಿಯ ತನ್ನ ಪ್ರಥಮ ಪಂದ್ಯದಲ್ಲಿ ಸಲ್ಲಾಂವ್‌ಕರ್ ತಂಡವನ್ನು ಎದುರಿಸಿದ್ದ ಛೆಟ್ರಿ ಪಡೆ, ಆ ಪಂದ್ಯವನ್ನು 3-2 ಅಂತರದಲ್ಲಿ ಗೆದ್ದುಕೊಂಡಿತ್ತು. ಎರಡನೇ ಪಂದ್ಯದಲ್ಲಿ ಮೋಹನ್ ಬಗಾನ್ ವಿರುದ್ಧ ಸೆಣಸಿದ್ದ ಬೆಂಗಳೂರು, ಆ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದಾದ ಮೇಲೆ, ಶಿಲ್ಲಾಂಗ್ ವಿರುದ್ಧ ತನ್ನ ಮೂರನೇ ಪಂದ್ಯದಲ್ಲಿ ಸೆಣಸಿದ್ದ ಅದು, 1-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದೀಗ ಪುಣೆ ವಿರುದ್ಧದ ಪಂದ್ಯ ಲೀಗ್ ಹಂತದಲ್ಲಿ ಬೆಂಗಳೂರು ಎದುರಿಸುತ್ತಿರುವ ನಾಲ್ಕನೇ ಪಂದ್ಯವಾಗಿದೆ.

ಬಗಾನ್ ತಂಡ ಹೊರಕ್ಕೆ
ಭಾನುವಾರ ನಡೆದ ಸಲ್ಗಾಂವ್‌ಕರ್ ಎಸ್‌ಸಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ 4-1 ಗೋಲುಗಳ ಅಂತರದಲ್ಲಿ ಶರಣಾಯಿತು. ಈ ಮೂಲಕ, ಬಗಾನ್ ತಂಡ ಪಂದ್ಯಾವಳಿಯಿಂದ ಆಚೆ ನಡೆದಿದೆ.

ಪದಾಧಿಕಾರಿಗಳ ರಾಜಿನಾಮೆ

ಫೆಡರೇಷನ್ ಕಪ್ ಪಂದ್ಯಾವಳಿಯಿಂದ ಮೋಹನ್ ಬಗಾನ್ ತಂಡ ಹೊರ ಬಿದ್ದ ಹಿನ್ನೆಲೆಯಲ್ಲಿ ತಂಡದ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳು ಸರಣಿ ರಾಜಿನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ವಪನ್ ಸಧಾನ್ ಬೋಸ್, ಪ್ರಧಾನ ಕಾರ್ಯದರ್ಶಿ ಅಂಜನ್ ಮಿತ್ರಾ, ಆರ್ಥಿಕ  ಕಾರ್ಯದರ್ಶಿ ದೆಬಶಿಶ್ ದತ್ತಾ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ಯುನೈಟೆಡ್ ಮೋಹನ್ ಬಗಾನ್ ಫುಟ್ಬಾಲ್ ಟೀಮ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಸ್ಥಾನಗಳಿಗೂ ಈ ಮೂವರು ರಾಜಿನಾಮೆ ಸಲ್ಲಿಸಿದ್ದಾರೆ.

SCROLL FOR NEXT