ಚೆನ್ನೈ: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ರಾವೆನ್ ಕ್ಲಾಸೆನ್ ಜೋಡಿಯು ಗೆಲುವಿನ ಹಾದಿಯಲ್ಲಿ ಮುಂದುವರಿದಿದ್ದು, ಚೆನ್ನೈ ಓಪನ್ ಎಟಿಪಿ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.
ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಪೇಸ್ ಜೋಡಿಯು 6-3, 6-3 ನೇರ ಸೆಟ್‌ಗಳ ಅಂತರದಲ್ಲಿ ಸ್ಪೇನ್ ಜೋಡಿಯಾದ ಪಬ್ಲೊ ಕ್ಯಾರೆನೊ ಬುಸ್ಟಾ ಹಾಗೂ ಗ್ಯುಲೆರ್ವೊ ಗ್ರಾಸಿಯಾ ಲೊಪೆಜ್ ಜೋಡಿ ವಿರುದ್ಧ ಜಯ ದಾಖಲಿಸಿದೆ. ಫೈನಲ್ ಸುತ್ತಿಗೆ ಪ್ರವೇಶಿಸಿರುವ ಪೇಸ್ ಏಳನೇ ಬಾರಿಗೆ ಚೆನ್ನೈ ಓಪನ್ ಪ್ರಶಸ್ತಿಯನ್ನು ಗೆಲ್ಲಲು ಸಜ್ಜಾಗಿದ್ದಾರೆ.
ಪಂದ್ಯದ ಆರಂಭದಿಂದ ಅಂತ್ಯದವರೆಗೂ ಎದುರಾಳಿ ಜೋಡಿ ಮೇಲೆ ಸವಾರಿ ನಡೆಸಿದ ಪೇಸ್ ಹಾಗೂ ರಾವೆನ್ ಪಂದ್ಯದ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಉಪಾಂತ್ಯಕ್ಕೆ ವಾವ್ರಿಂಕಾ: ವಿಶ್ವದ ನಾಲ್ಕನೇ ರ್ಯಾಂಕಿಂಗ್ ಹಾಗೂ ನಾಲ್ಕನೇ ಶ್ರೇಯಾಂಕಿತ ಸ್ಟಾನಿಸ್ಲಾಸ್ ವಾವ್ರಿಂಕಾ, ಚೆನ್ನೈ ಓಪನ್ ಎಟಿಪಿ ಟೆನಿಸ್ ಟೂರ್ನಿಯ ಉಪಾಂತ್ಯದ ಸುತ್ತಿಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಪಂದ್ಯದಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ ತಮ್ಮ ಎದುರಾಳಿ ನಾಲ್ಕನೇ ಶ್ರೇಯಾಂಕಿತ ಗಿಲ್ಲೆಸ್ ಮುಲ್ಲರ್ ವಿರುದ್ಧ 6-2, 7-6(4) ಸೆಟ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.