ಬ್ರಿಸ್ಬೇನ್: ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಈಗ 1000 ಎಟಿಪಿ ಪಂದ್ಯಗಳ ಸರದಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಫೆಡರರ್ ಈ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಸುತ್ತಿನಲ್ಲಿ ಕೆನಡಾ ಆಟಗಾರ ಮಿಲೊಸ್ ರಾವೊನಿಕ್ ವಿರುದ್ಧ ಫೆಡರರ್ 6-4, 6-7(2-7), 6-4 ಸೆಟ್‌ಗಳ ಅಂತರದಲ್ಲಿ ಗೆಲವಿನ ಸಿಹಿ ಸವಿದರು.
ಎರಡು ಗಂಟೆ 13 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಫೆಡರರ್ ಉತ್ತಮ ಆರಂಭದ ಮೂಲಕ ಶುಭಾರಂಭ ಮಾಡಿದರು. ಮೊದಲ ಸೆಟ್‌ನಲ್ಲಿ 6-4 ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದ ಫೆಡರರ್, ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು.
ಮೂರನೇ ಸೆಟ್‌ನಲ್ಲಿ ಒತ್ತಡದಲ್ಲಿದ್ದರೂ ಫೆಡರರ್, ಜಾಗರೂಕತೆಯಿಂದ ಆಡಿದರು. ಆ ಮೂಲಕ ಅಂತಿಮ ಸೆಟ್‌ನಲ್ಲಿ 6-4ರ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕಿದರು. ಈ ಮೂಲಕ ಫೆಡರರ್ 83ನೇ ಪ್ರಶಸ್ತಿಯನ್ನು ಬಾಚಿಕೊಂಡರು. ಅಲ್ಲದೆ ಸಾವಿರ ಪಂದ್ಯಗಳನ್ನು ಗೆದ್ದ ಮೂರನೇ ಆಟಗಾರನಾದರು.
ಈ ಪಂದ್ಯಾವಳಿಯನ್ನು ಇದೇ ತಿಂಗಳು ಅಂದರೆ ಜ. 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ಪೂರ್ವಸಿದ್ಥತೆ ನಡೆಸಲು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿತ್ತು. ಈ ಗೆಲವಿನಿಂದ ಆತ್ಮ ವಿಶ್ವಾಸ ಹೆಚ್ಚಿಕೊಂಡಿರುವ ಫೆಡರರ್, ಉತ್ತಮ ಫಾರ್ಮ್‌ನೊಂದಿಗೆ ಮೆಲ್ಬರ್ನ್‌ಗೆ ತೆರಳಲಿದ್ದು ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.