ಕ್ರೀಡೆ

ವಿಶ್ವಕಪ್‌ನಲ್ಲಿ ಭಾರತ ಮಾರಕವಾಗಬಹುದು: ಹಸ್ಸಿ

Srinivasamurthy VN

ಸಿಡ್ನಿ: ಟೆಸ್ಟ್ ಸರಣಿಯಲ್ಲಿ ಸೋತಿರುವ ಕಾರಣ ಭಾರತವನ್ನು ಲಘುವಾಗಿ ನೋಡಬೇಡಿ. ತ್ರೀಕೋನ ಸರಣಿ ಹಾಗೂ ನಂತರದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತದ ಆಟಗಾರರು ಆತ್ಮ ವಿಶ್ವಾಸದಿಂದಲೇ ಸಿದ್ಧವಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಮೈಕ್ ಹಸ್ಸಿ ಹೇಳಿದ್ದಾರೆ.

ಭಾರತದ ಆಟಗಾರರು ಸುಮಾರು ಎರಡು ತಿಂಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಇಲ್ಲಿನ ವಾತಾವರಣಕ್ಕೆ ಉತ್ತಮ ರೀತಿಯಲ್ಲಿ ಒಗ್ಗಿಕೊಂಡಿರುವ ಅವರು, ಪುಟಿತದ ಮತ್ತು ವೇಗದ ಪಿಚ್‌ಗಳಿಗೆ ಆಟಗಾರರು ಸರಿಯಾಗಿಯೇ ಹೊಂದಿಕೊಂಡಿದ್ದಾರೆ. ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿಯೂ ಟೀಂ ಇಂಡಿಯಾ ಪಾಲ್ಗೊಳ್ಳಲಿದೆ. ಹೀಗಾಗಿ ವಿಶ್ವಕಪ್‌ಗೆ ಉತ್ತಮ ರೀತಿಯಲ್ಲಿಯೇ ಸಜ್ಜಾಗಲಿದ್ದಾರೆ ಎಂದು ಹ್ಸಸಿ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಸರಣಿಯಲ್ಲಿನ ಪ್ರದರ್ಶನ ಆಧಾರದ ಮೇಲೆ ಭಾರತದ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ನಾಲ್ಕು ಪಂದ್ಯಗಳ ಸರಣಿಯನ್ನು 0-2ರಿಂದ ಆಸ್ಟ್ರೇಲಿಯಾ ಎದುರು ಭಾರತ ಸೋತಿದ್ದರೂ ಸಹ ಅದನ್ನು ಹಗುರುವಾಗಿ ಕಾಣಲಾಗದು. ಮೇಲಾಗಿ ಏಕದಿನ ಸರಣಿಗೆ ಅದು ಭಿನ್ನ ತಂಡವಾಗಿದೆ. ಆಟಗಾರರು ಹೆಚ್ಚು ಆತ್ಮ ವಿಶ್ವಾಸದಲ್ಲಿದ್ದು, ಎಂತಹ ಸವಾಲನ್ನೂ ಎದುರಿಸಲು ಸಶಕ್ತರಾಗಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಉತ್ತಮವಾಗಿದ್ದು, ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಮುರಳಿ ವಿಜಯ್, ಅಜಿಂಕ್ಯಾ ರಹಾನೆ ಕೂಡ ಕೊಹ್ಲಿಗೆ ಉತ್ತಮ ಸಾಥ್ ನೀಡಬಲ್ಲರು.

ತಂಡದ ಇತರೆ ಆಟಗಾರರು ಗುಣಮಟ್ಟದ ಪ್ರದರ್ಶನ ನೀಡಲು ಶಕ್ತರಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ವೃತ್ತಿ ಜೀವನದ ತಮ್ಮ ಎರಡನೇ ಟೆಸ್ಟ್‌ನಲ್ಲಿಯೇ ಶತಕ ದಾಖಲಿಸಿದ ಕೆಎಲ್ ರಾಹುಲ್ ಪ್ರದರ್ಶನ ಮೆಚ್ಚುವಂಥದ್ದು ಎಂದಿದ್ದಾರೆ. ಆದರೆ ಭಾರತದ ಬೌಲಿಂಗ್ ಕಳಪೆಯಾಗಿದೆ. 2011ರ ವಿಶ್ವಕಪ್‌ಗಿಂತಲೂ ಈ ಬಾರಿಯ ದಾಳಿ ಉತ್ತಮ ಎನಿಸಿದ್ದರೂ, ಅವರು ಸಫಲರಾಗುತ್ತಿಲ್ಲ. ಒಳ್ಳೆಯ ಬೌಲರ್ ಮತ್ತು ಒಳ್ಳೆಯ ಬೌಲಿಂಗ್ ನಡುವೆ ವ್ಯತ್ಯಾಸವಿದೆ.

ಸರಣಿಯುದ್ದಕ್ಕೂ ಟೀಂ ಇಂಡಿಯಾ ಬೌಲರ್‌ಗಳು ಅಶಿಸ್ತಿನ ದಾಳಿ ನಡೆಸಿದ್ದಾರೆ. ಉತ್ತಮ ಲೈನ್ ಅಂಡ್ ಲೆನ್ತ್ ದಾಳಿ ಪ್ರದರ್ಶಿಸಲು ಬಹಳಷ್ಟು ವೈಫಲ್ಯ ಕಂಡಿದ್ದಾರೆ. ಆದರೆ ಟೆಸ್ಟ್ ಸರಣಿಯಿಂದ ಅವರು ಉತ್ತಮ ಪಾಠ ಕಲಿತಿರಬಹುದು. ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಹೋರಾಟಕ್ಕೆ ಅಣಿಯಾಗಲಿದ್ದಾರೆ. ಹಾಗಾಗಿ ತ್ರಿಕೋನ ಸರಣಿ ಮತ್ತು ವಿಶ್ವಕಪ್‌ನಲ್ಲಿ ಗುಣಮಟ್ಟದ ದಾಳಿ ನಡೆಸಬಲ್ಲರು ಎಂದು ನನಗನಿಸಿದೆ ಎಂದು ಮೈಕ್ ಹಸ್ಸಿ ಪ್ರತಿಕ್ರಿಯಿಸಿದ್ದಾರೆ.

SCROLL FOR NEXT