ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಡಿವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವುದರ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ತಂಡದ ಕೋರಿ ಆ್ಯಂಡರ್‌ಸನ್ ಅವರ ದಾಖಲೆಯನ್ನು ಡಿವಿಲಿಯರ್ಸ್ ಹಿಂದಕ್ಕೆ ಹಾಕಿದ್ದಾರೆ.
ಈ ಪಂದ್ಯದಲ್ಲಿ ಕೇವಲ 44 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಬರೋಬ್ಬರಿ 149 ರನ್ ಸಿಡಿಸಿದರು. ನಿಗದಿತ 50 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 439ರನ್‌ಗಳನ್ನು ಪೇರಿಸಿದೆ. ಈ ಪೈಕಿ ಡಿವಿಲಿರ್ಯಸ್ (149 ರನ್), ಆಮ್ಲಾ (153 ರನ್) ಮತ್ತು ರಾಸ್ಸೋವ್ (128ರನ್) ಭರ್ಜರಿ ಶತಕಗಳನ್ನು ಸಿಡಿಸಿದ್ದಾರೆ. ಡಿವಿಲಿಯರ್ಸ್ ಅವರ ದಾಖಲೆ ಶತಕದಲ್ಲಿ ಒಟ್ಟು 8 ಬೌಂಡರಿ ಮತ್ತು 16 ಸಿಕ್ಸರ್‌ಗಳು ಒಳಗೊಂಡಿವೆ.
ಈ ಹಿಂದೆ ಇದೇ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಕೋರಿ ಆ್ಯಂಡರ್ ಸನ್ ಅವರು 36 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಈವರೆಗಿನ ಅತಿ ವೇಗದ ಶತಕ ಎಂದು ದಾಖಲಾಗಿತ್ತು. ಇದೀಗ ಡಿವಿಲಿಯರ್ಸ್ ಈ ದಾಖಲೆಯನ್ನು ಮುರಿದಿದ್ದಾರೆ.