ಮೆಲ್ಬನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.
ಟಾಸ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್(2) ಒಂದಂಕ್ಕಿ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ಕೇವಲ 9 ರನ್ ಗಳಿಸಿ ಔಟಾದರು.
ಕೇವಲ 59 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾಗಿದ್ದು ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾರ ಜತೆಯಾಟ. ಭರ್ಜರಿ ಬ್ಯಾಟಿಂಗ್ ಮಾಡಿದ ಈ ಇಬ್ಬರು ನಾಲ್ಕನೇ ವಿಕೆಟ್‌ಗೆ 126 ರನ್‌ಗಳ ಜತೆಯಾಟ ನೀಡಿದರು. 51 ರನ್ ಗಳಿಸಿದ್ದಾಗ ಸುರೇಶ್ ರೈನಾ ಔಟಾದರು.
ತಾಳ್ಮೆಯಿಂದ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 138 ರನ್ ಗಳಿಸಿದ್ದಾಗ ಸ್ಟಾರ್ಕ್ ಎಸೆತದಲ್ಲಿ ಮ್ಯಾಕ್ಸ್‌ವೇಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ರಹಾನೆ 12 ರನ್‌ಗೆ ಔಟಾದರೆ, ನಾಯಕ ಧೋನಿ 19 ರನ್‌ಗೆ ಸ್ಟಾರ್ಕ್ ಎಸೆತಕ್ಕೆ ಬೌಲ್ಡ್ ಆದರು. ಎ.ಆರ್ ಪಟೇಲ್ ಹಾಗೂ ಭುವನೇಶ್ವರ ಕುಮಾರ್ ಶೂನ್ಯಕ್ಕೆ ಔಟಾದರು. ಆರ್. ಅಶ್ವಿನ್ ಅಜೇಯ 14 ರನ್ ಗಳಿಸಿದರೆ ಮೊಹಮ್ಮದ್ ಶಮಿ ಅಜೇಯ 2 ರನ್ ಗಳಿಸಿದರು. ನಿಗದಿತ ಐವತ್ತು ಓವರ್‌ಗಳಲ್ಲಿ ಭಾರತ 267 ರನ್ ಗಳಿಸಿದೆ.