ಸಿಡ್ನಿ: ವಿಶ್ವಕಪ್ ಟೂರ್ನಿಯ ಸಿದ್ಧತಾ ವೇದಿಕೆಯಾಗಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ತಂಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.
ಸೋಮವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಕಾರಣ, ಸರಣಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತು ಸೊರಗಿರುವ ಟೀಂ ಇಂಡಿಯಾ ಟೂರ್ನಿಯಲ್ಲಿ ಇನ್ನಷ್ಟೇ ಅಂಕದ ಖಾತೆ ತೆರೆಯಬೇಕಿದೆ.
ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋತರೆ, ಟೈ ಆದರೆ ಅಥವಾ ಫಲಿತಾಂಶ ಪಡೆಯದಿದ್ದರೆ ಧೋನಿ ಪಡೆ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದದ್ಧ ಬೋನಸ್ ಗೆಲವಿನ ಜತೆಗೆ ಇಂಗ್ಲೆಂಡ್‍ಗಿಂತಲೂ ಉತ್ತಮ ರೀತಿಯಲ್ಲಿ ರನ್‍ರೇಟ್ ಕಾಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ ಭಾರತ ಟೂರ್ನಿಯಲ್ಲಿ ಮತ್ತಷ್ಟು ಒತ್ತಡವನ್ನು ದೂರವಿಡಲು ಈ ಪಂದ್ಯದಲ್ಲಿ ಗೆಲವು ಪ್ರಮುಖವಾಗಿದೆ.
ಇತ್ತ ಆಸ್ಟ್ರೇಲಿಯಾ ತಂಡ ಆಡಿರುವ ಮೂರೂ ಪಂದ್ಯಗಳಲ್ಲೂ ಗೆಲವು ದಾಖಲಿಸಿ ಫೈನಲ್‍ಗೆ ಪ್ರವೇಶಿಸಿದೆ. ಹಾಗಾಗಿ ತಂಡ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಸಾಕಷ್ಟು ಪ್ರಯೋಗಕ್ಕೆ ಮುಂದಾಗುತ್ತಿದೆ. ಈ ಪ್ರಯೋಗದ ನಡುವೆ ಭಾರತ ಆತಿಥೇಯರಿಗೆ ಯಾವ ರೀತಿಯ ಸವಾಲು ನೀಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.
ಇಶಾಂತ್-ಜಡ್ಡು ಲಭ್ಯ
ಗಾಯದ ಸಮಸ್ಯೆಗೆ ಸಿಲುಕಿದ್ದ ಭಾರತದ ಅನುಭವಿ ಬೌಲರ್ ಇಶಾಂತ್ ಶರ್ಮಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಚೇತರಿಸಿಕೊಂಡಿದ್ದು, ತಂಡದಲ್ಲಿ ಆಯ್ಕೆಯಾಗಲು ಸಿದ್ಧರಾಗಿದ್ದಾರೆ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ. ಇನ್ನು ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ.
ಉಳಿದಂತೆ ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದ ಸ್ಟುವರ್ಟ್ ಬಿನ್ನಿ ಈ ಪಂದ್ಯದಲ್ಲಿ ಕಣಕ್ಕಿಳಿದರೆ ಅಚ್ಚರಿ ಇಲ್ಲ. ಇನ್ನು ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಆರಂಬಿsಕ ಶಿಖರ್ ಧವನ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಗುವುದೇ ಅಥವಾ ಇನ್ನು ಪ್ರಯೋಗಗಳು ಮುಂದುವರಿಯುವುದೇ, ಜಡೇಜಾ ತಂಡಕ್ಕೆ ಬಂದರೆ ಅಕ್ಷರ್ ಪಟೇಲ್ ಸ್ಥಾನಕ್ಕೆ ಕುತ್ತು ಬರುವುದೇ, ಇನ್ನು ಆರ್.ಅಶ್ವಿನ್ ಕಣಕ್ಕಿಳಿಯುವರೇ ಎಂಬ ಸಾಕಷ್ಟು ವಿಷಯಗಳು ಭಾರತೀಯ ಅಭಿಮಾನಿಗಳ ಮನದಲ್ಲಿ ಕಾಡುತ್ತಿವೆ.
ಬೇಯ್ಲಿ ವಾಪಸ್
ಆಸ್ಟ್ರೇಲಿಯಾ ತಂಡದ ನಾಯಕ ಜಾರ್ಜ್ ಬೇಯ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಇನ್ನು ಕ್ಸೇವಿಯರ್ ದೊಹರ್ಟಿ ಹಾಗೂ ಜೋಶ್ ಹ್ಯಾಜೆಲ್ ವುಡ್ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಶ್ವಕಪ್‍ಗೂ ಮುನ್ನ ತಂಡದಲ್ಲಿರುವ ಎಲ್ಲಾ ಅವಕಾಶವನ್ನು ಪರೀಕ್ಷಿಸಿಕೊಳ್ಳಲು ಆಸ್ಟ್ರೇಲಿಯಾ ನಿರ್ಧರಿಸಿದೆ.
ಒಟ್ಟಿನಲ್ಲಿ ಪ್ರಯೋಗದತ್ತ ಆಸ್ಟ್ರೇಲಿಯಾ ಚಿಂತಿಸುತ್ತಿದ್ದರೆ, ಮತ್ತೊಂದೆಡೆ ವಿಶ್ವಕಪ್ ತಂಡಕ್ಕೆ ಸರಿಯಾದ ಹೊಂದಾಣಿಕೆ ಕಂಡುಕೊಳ್ಳುವುದರ ಜತೆಗೆ ಪಂದ್ಯದಲ್ಲಿ ಗೆಲವು
ಸಾಧಿಸಲೇಬೇಕಾದ ಒತ್ತಡ ಟೀಂ ಇಂಡಿಯಾ ಮೇಲಿದೆ. ಹಾಗಾಗಿ ಈ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದೆ.