ಕೋಲ್ಕತಾ: ಹಾಲಿ ಚಾಂಪಿಯನ್ ಹೆಗ್ಗಳಿಕೆಗೆ ತಕ್ಕ ಪ್ರದರ್ಶನ ನೀಡಲು ಮತ್ತೊಮ್ಮೆ ವಿಫಲರಾಗಿರುವ ಬೆಂಗಳೂರು ಎಫ್ ಸಿ ತಂಡದ ಆಟಗಾರರು ಐ-ಲೀಗ್‍ನ ಹೊಸ ಋತುವಿನ ಸಮರದಲ್ಲಿ ತಮ್ಮ ಮೂರನೇ ಪಂದ್ಯದಲ್ಲೂ ಮೊದಲ ಗೆಲವು ದಾಖಲಿಸುವಲ್ಲಿ ಮುಗ್ಗರಿಸಿದ್ದಾರೆ.
ಇಲ್ಲಿನ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ಈಸ್ಟ್ ಬೆಂಗಾಲ್ ಆಟಗಾರರು 1-0 ಗೋಲಿನಿಂದ ಬೆಂಗಳೂರು ಎಫ್ ಸಿಗೆ ಸೋಲುಣಿಸಿದರು. ಸಂಪರ್ಕ ಆಟಗಾರ ಅಭಿನಾಸ್ ರ್ಯೂಡಾಸ್ ಪಂದ್ಯದ 53ನೇ ನಿಮಿಷದಲ್ಲಿ ಗೋಲು ಗಳಿಸಿ ಈಸ್ಟ್ ಬೆಂಗಾಲ್ ತಂಡಕ್ಕೆ ರೋಚಕ ಗೆಲವು ತಂದುಕೊಟ್ಟರು.
ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಅವಧಿಯ ಆಟ ಪ್ರಾರಂಭವಾಗಿ ಐದು ನಿಮಿಷ ಕಳೆಯುವಷ್ಟರಲ್ಲಿಯೇ ಈಸ್ಟ್ ಬೆಂಗಾಲ್ ಗೋಲಿನ ಖಾತೆ ತೆರೆದು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಮೊದಲ ಪಂದ್ಯದಲ್ಲಿ ಡೆಂಪೊ ಎದುರು ಗೋಲುರಹಿತ ಡ್ರಾ ಹಾಗೂ ಎರಡನೇ ಪಂದ್ಯದಲ್ಲಿ ಪುಣೆ ಎದುರು ಏಕೈಕ ಗೋಲಿನಿಂದ ಆಘಾತ ಅನುಭವಿಸಿದ್ದ ಸುನೀಲ್ ಛೆಟ್ರಿ ಪಡೆ, ಮೂರನೇ ಪಂದ್ಯದಲ್ಲೂ ಕೂಡ ಬೆಂಗಾಲ್ ಎದುರು ಅದೇ ವೈಫಲ್ಯವನ್ನೇ ಮುಂದುವರಿಸಿತು.
ಪಂದ್ಯದ ವೇಳೆ ಕೊಂಚ ಒತ್ತಡದಲ್ಲಿಯೇ ಇದ್ದಂತೆ ಕಂಡುಬಂದ ಬೆಂಗಳೂರು ಎಫ್ ಸಿ, ಮೊದಲ ಅವ„ಯಲ್ಲಿ ಎದುರಾಳಿ ಮುಂದೆ ಕಠಿಣ ಸವಾಲುಗಳನ್ನೇ ನಿಲ್ಲಿಸಿತು. ಆದರೆ,
ಉತ್ತರಾರ್ಧದ ಶುರುವಿನಲ್ಲಿಯೇ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟಿತು.
ಇನ್ನೊಂದೆಡೆ ಈಸ್ಟ್ ಬೆಂಗಾಲ್, ತನ್ನ ಎರಡನೇ ಪಂದ್ಯದಲ್ಲಿ ಮೊದಲ ಗೆಲವು ದಾಖಲಿಸಿ ಪ್ರಭುತ್ವ ಮೆರೆಯಿತು. ಮೊದಲ ಪಂದ್ಯದಲ್ಲಿ ಆತಿಥೇಯರು, ಸ್ಪೋರ್ಟಿಂಗ್ ಗೋವಾ ವಿರುದ್ಧ 1-1ರಿಂದ ಡ್ರಾ ಫಲಿತಾಂಶ ಪಡೆದಿದ್ದರು. ಈ ಸೋಲಿನೊಂದಿಗೆ ಬೆಂಗಳೂರು ಎಫ್ ಸಿ ಮೂರು ಪಂದ್ಯಗಳಿಂದ 1 ಅಂಕದ ಸಂಪಾದನೆಯಲ್ಲಿಯೇ ಉಳಿದರೆ, ಈಸ್ಟ್ ಬೆಂಗಾಲ್ 2 ಪಂದ್ಯಗಳಿಂದ ಅಂಕಗಳಿಕೆಯನ್ನು 4ಕ್ಕೆ ಹೆಚ್ಚಿಸಿಕೊಂಡಿತು.
ಡ್ರಾ ಪಂದ್ಯದಲ್ಲಿ ಸಲ್ಗಾಂವಕರ್
ಮಡಗಾಂವ್‍ನಲ್ಲಿ ಇಂದೇ ನಡೆದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಸಲ್ಗಾಂವಕರ್ ಮತ್ತು ಮೋಹನ್ ಬಗಾನ್ ತಂಡಗಳು ಗೋಲುರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದವು. ಎರಡೂ ತಂಡಗಳಿಗೆ ಗೋಲು ಗಳಿಸುವ ಕೆಲ ಉತ್ತಮ ಅವಕಾಶಗಳು ಲಭಿಸಿದ್ದವು. ಆದರೆ, ಗುರಿ ಸೇರುವ ಹಾದಿಯಲ್ಲಿ ವಿಫಲವಾದವು.