ಕ್ರೀಡೆ

ಫೈನಲ್ ಗೆ ಪೇಸ್, ಸಾನಿಯಾ ಔಟ್

Srinivasamurthy VN

ಮೆಲ್ಬರ್ನ್: ಭಾರತದ ಲಿಯಾಂಡರ್ ಪೇಸ್ ಮತ್ತೊಂದು ಗ್ರ್ಯಾನ್ ಸ್ಲಾಮ್ ಗೆಲ್ಲುವತ್ತ ಕೊನೆಯ ಮೆಟ್ಟಿಲೇರಿದ್ದಾರೆ. ಆದರೆ, ತವರಿನ ಮತ್ತೊಬ್ಬ ಭರವಸೆಯ ಮಿಂಚು ಸಾನಿಯಾ ಮಿರ್ಜಾ ಮಾತ್ರ ನಿರಾಸೆ ಅನುಭವಿಸಿದ್ದಾರೆ.

ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯನ್ ಓಪನ್ನ ಮಿಶ್ರ ಡಬಲ್ಸ್ ನಲ್ಲಿ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಆಡುತ್ತಿರುವ ಲಿಯಾಂಡರ್ ಪೇಸ್ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕಿತ ಪೇಸ್-ಹಿಂಗಿಸ್ ಜೋಡಿ, 7-5, 6-4 ನೇರ ಸೆಟ್ ಗಳಿಂದ ಚೈನೀಸ್ ತೈಪೇನ ಸು-ವೀ ಶೀಹೆ ಮತ್ತು ಉರುಗ್ವೆಯ ಪಬ್ಲೊ ಕ್ಯುವಾಸ್ ವಿರುದ್ಧ ಜಯಗಳಿಸಿತು.

ಆದರೆ, ಇಂದೇ ನಡೆದ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಜೋಡಿಯಾಗಿದ್ದ ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್ ನ ಬ್ರುನೊ ಸೋರೆಸ್, 6-3, 2-6, 8-10 ಸೆಟ್ ಗಳಿಂದ ಫ್ರಾನ್ಸ್ ನ ಕ್ರಿಸ್ಟಿಯನ್ ಮ್ಲಾಡೆನೊವಿಕ್ ಮತ್ತು ಕೆನಡಾದ ಡ್ಯಾನಿಯಲ್ ನೆಸ್ಟರ್ ಎದುರು ತಲೆಬಾಗಿಸಿದರು.

ಫೈನಲ್ ಗೆ ಜೊಕೊವಿಚ್
ಅಗ್ರಮಾನ್ಯ ಆಟಗಾರ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಮುಖಾಬಲದಲ್ಲಿ
ಜೊಕೊವಿಚ್ ಗೆ ಬ್ರಿಟನ್ನಿನ ಆ್ಯಂಡಿ ಮರ್ರೆ ಸವಾಲು ಎದುರಾಗಲಿದೆ.

ಶುಕ್ರವಾರ ನಡೆದ ಸಿಂಗಲ್ಸ್ ಸುತ್ತಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಚ್, 7-6 (7-1), 3-6, 6-4, 4-6, 6-0 ಸೆಟ್ ಗಳಿಂದ ಹಾಲಿ ಚಾಂಪಿಯನ್, ಸ್ವಿಜರ್ ಲೆಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕ ಅವರನ್ನು ಸೋಲಿಸಿದರು.

ಇಂದು ಸೆರೆನಾ- ಮಾರಿಯಾಪ್ರಶಸ್ತಿಗೆ ಸೆಣಸು
ಶನಿವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್  ಮತ್ತು ರಷ್ಯಾದ ಮಾರಿಯಾ ಶರಪೋವಾ, ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಸೆರೆನಾ ಜೀವನದ 19ನೇ ಹಾಗೂ ಆರನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಶರರೋವಾ, ಎರಡನೇ ಆಸ್ಟ್ರೇಲಿಯನ್ ಓಪನ್ ಹಾಗೂ ಒಟ್ಟಾರೆ, 6ನೇ ಗ್ರ್ಯಾನ್ ಸ್ಲಾಮ್ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸದಲ್ಲಿದ್ದಾರೆ

SCROLL FOR NEXT