ಗುವಾಹಟಿ: ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡದ ಆಟಗಾರರು ಕೊನೆಗೂ ಪ್ರಸಕ್ತ ಸಾಲಿನ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೊದಲ ಗೆಲವಿನ ಸಂಭ್ರಮ
ಆಚರಿಸಿದ್ದಾರೆ. ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ತನ್ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡ 4-0 ಗೋಲುಗಳಿಂದ ರಾಯಲ್ ವಾಹಿಂಗ್‍ಡೋ ತಂಡವನ್ನು ಸೋಲಿಸಿತು. ವಿಜೇತ ಬೆಂಗಳೂರು ಎಫ್ ಸಿ ಪರ ಸಿ.ಕೆ. ವಿನೀತ್ 34ನೇ ನಿಮಿಷ, ಯೂಗೆನ್ಸನ್ ಲಿಂಗ್‍ಡೋ 60ನೇ ನಿಮಿಷ ಹಾಗೂ ಖಂಗೇಬಾಮ್ ಥೋಯಿ 67ನೇ ಮತ್ತು 78ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಮೊದಲ ಅವಧಿ ಯಲ್ಲಿ ಏಕೈಕ ಗೋಲಿನಿಂದ ಮುಂದಿದ್ದ ಸುನೀಲ್ ಛೆಟ್ರಿ ಪಡೆ, ಎರಡನೇ ಅವಧಿ ಯಲ್ಲಿ ಕೇವಲ 18 ನಿಮಿಷಗಳ ಅಂತರದಲ್ಲಿ 3 ಗೋಲು ಗಳಿಸಿ ಗಮನ ಸೆಳೆಯಿತು. ಇದಕ್ಕೂ ಮುನ್ನ ಆಡಿದ್ದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಡ್ರಾ ಫಲಿತಾಂಶ ಪಡೆದಿದ್ದ ಬಿಎಫ್ ಸಿ ಈಗ ಮೊದಲ ಗೆಲವಿನೊಂದಿಗೆ ಅಂಕ ಗಳಿಕೆಯನ್ನು 4ಕ್ಕೆ ಹೆಚ್ಚಿಸಿಕೊಂಡಿತು. ಆ ಮೂಲಕ ಒಟ್ಟು 11 ತಂಡಗಳ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿತು.