ಕ್ರೀಡೆ

ಮಲೇಷ್ಯಾ ಮಣಿಸಿದ ಭಾರತ

Vishwanath S

ಆ್ಯಂಟ್ವೆರ್ಪ್(ಬೆಲ್ಜಿಯಂ): ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟವಾಡಿದ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯಲ್ಲಿ ಉಪಾಂತ್ಯ ಸುತ್ತಿಗೆ ಪ್ರವೇಶ ಪಡೆದಿದೆ.

ಬುಧವಾರ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ಮಲೇಷ್ಯಾ ತಂಡವನ್ನು ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಪಂದ್ಯದಲ್ಲಿ ಭಾರತ ತಂಡದ ಪರ ಸತ್ಬೀರ್ ಸಿಂಗ್ (2ನೇ), ಜಸ್ಜೀತ್ ಸಿಂಗ್ (49ನೇ ಹಾಗೂ 55ನೇ ನಿಮಿಷದಲ್ಲಿ) ಗೋಲು ದಾಖಲಿಸಿ ಗೆಲವಿನ ರೂವಾರಿಯಾದರು. ಮಲೇಷ್ಯಾ ತಂಡದ ಪರ ರಜಾಯ್ ರಹೀಮ್ (15ನೇ) ಮತ್ತು ಶಾಹ್ರಿಲ್ ಸಾಬಾಹ್ (23ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು.

ಪಂದ್ಯದ ಆರಂಭದಲ್ಲಿ ಭಾರತ ತಂಡ ಆಕ್ರಮಣಕಾರಿ ಆಟದಿಂದ ಗೋಲಿನ ಖಾತೆ ತೆರೆದು ಮುನ್ನಡೆ ಸಾಧಿಸಿತು. ನಂತರ ಚೇತರಿಕೆಯ ಮೂಲಕ ಭಾರತ ರಕ್ಷಣಾತ್ಮಕ ವಿಭಾಗವನ್ನು ಮೆಟ್ಟಿನಿಂತ ಮಲೇಷ್ಯಾ ಪಂದ್ಯದ ಮೊದಲಾರ್ಧದಲ್ಲಿ ಬಿಗಿ ಹಿಡಿತ ಸಾಧಿಸಿತು. ಇನ್ನು ಅಂತಿಮ ಕ್ವಾರ್ಟರ್‍ನಲ್ಲಿ ಸಂಘಟಿತ ದಾಳಿ ನಡೆಸಿದ ಸರ್ದಾರ್ ಪಡೆ, ಮಲೇಷ್ಯಾ ತಂಡದ ತಂತ್ರವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

ಪಂದ್ಯದಲ್ಲಿ ಭಾರತ ಆಟಗಾರರನ್ನು ಕಾಡುವ ಮೂಲಕ ಹೆಚ್ಚು ಪೆನಾಲ್ಟಿ ಅವಕಾಶವನ್ನು ಪಡೆದ ಮಲೇಷ್ಯಾ ತಂಡ, ಗೋಲುಗಳನ್ನು ದಾಖಲಿಸಿ ಒಂದು ಹಂತದಲ್ಲಿ ಭಾರತವನ್ನು ಹಿಂದಿಕ್ಕುವಲ್ಲಿ
ಯಶಸ್ವಿಯಾಗಿತ್ತು. ಆದರೆ ಹಿನ್ನಡೆ ಅನುಭವಿಸಿದ ಹಂತದಲ್ಲೂ ಸಹ ಆಕ್ರಮಣಕಾರಿ ಆಟದಿಂದ ಪಂದ್ಯದ ಮಹತ್ವದ ಹಂತದಲ್ಲಿ ಮತ್ತೆ ನಿಯಂತ್ರಣ ಪಡೆಯಿತು. ಪಂದ್ಯದ 2ನೇ ನಿಮಿಷದಲ್ಲಿ ಆಕಾಶ್ ದೀಪ್ ಸಿಂಗ್ ಚೆಂಡನ್ನು ಡಿ ಬಾಕ್ಸ್‍ಗೆ ತಂದು ನಂತರ ಸತ್ಬೀರ್ ಸಿಂಗ್ ಗೆ ಪಾಸ್ ನೀಡಿದರು. ಈ ವೇಳೆ ಸಿಕ್ಕ ಅವಕಾಶ ಬಳಸಿಕೊಂಡ ಸತ್ಬೀರ್ ಚೆಂಡಿಗೆ ಗೋಲಿನ ದಾರಿ ತೋರುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ನಂತರದ ಹಂತದಲ್ಲಿ ಜಾಣ್ಮೆಯ ಆಟ ಪ್ರದರ್ಶಿಸಿದ ಮಲೇಷ್ಯಾ, ಭಾರತ ವಿರುದ್ಧ ತಿರುಗಿ ಬಿದ್ದಿತು. 15ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಮಲೇಷ್ಯಾ ಗೋಲು ದಾಖಲಿಸುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಿತು. ನಂತರ ಕೆಲ ಹೊತ್ತಿನಲ್ಲೇ ಮತ್ತೊಂದು ಪೆನಾಲ್ಟಿ ಅವಕಾಶವನ್ನು ಪಡೆದ ಮಲೇಷ್ಯಾ, ಸರ್ದಾರ್ ಪಡೆ ವಿರುದ್ಧ ಮುನ್ನಡೆ ಸಾಧಿಸಿದರು.

ಭಾರತದ ರಕ್ಷಣಾತ್ಮಕ ವಿಭಾಗಕ್ಕೆ ಸವಾಲೆಸೆದ ಎದುರಾಳಿ ತಂಡ, ಒತ್ತಡ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಪಂದ್ಯದ ಮೊದಲಾರ್ಧದಲ್ಲಿ 1-2 ಗೋಲುಗಳ ಹಿನ್ನಡೆ ಅನುಭವಿಸಿತ್ತು. ಪಂದ್ಯದ ಮೂರನೇ ಕ್ವಾರ್ಟರ್‍ನಲ್ಲೂ ಆಕ್ರಮಣಕಾರಿ ಆಟವನ್ನು ಬಿಡದ ಸರ್ದಾರ್ ಪಡೆ, ಎದುರಾಳಿ ಆಟಗಾರರ ಮೇಲೆ ಒತ್ತಡ ಹಾಕಿತು. ಭಾರತ ಅಂತಿಮ ಅವ„ಯಲ್ಲಿ 2 ಗೋಲು ದಾಖಲಿಸುವ ಮೂಲಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದರು.

SCROLL FOR NEXT