ಕರಾಚಿ: ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಆಡುವ ಆರ್ಹತೆಯನ್ನು ಪಾಕಿಸ್ತಾನ ಹಾಕಿ ತಂಡ ಕಳೆದುಕೊಂಡಿರುವುದು ಆ ದೇಶದಲ್ಲಿ ಹಲವಾರು ಸ್ಥಿತ್ಯಂತರಗಳಿಗ ಕಾರಣವಾಗಿದೆ. ಪಾಕಿಸ್ತಾನ ಹಾಕಿ ತಂಡದ ವೈಫಲ್ಯದ ನೈತಿಕ ಹೊಣೆ ಹೊತ್ತು ಅಲ್ಲಿನ ಹಾಕಿ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಸ್ಥಾನ ಗಳಿಗೆ ರಾಜೀನಾಮೆ ನೀಡಿದ್ದಾರೆಂದು ದಿ ಸ್ಟೇಟ್ ಮನ್ ವರದಿ ಮಾಡಿದೆ.
ಬೆಲ್ಜಿಯಂ ನಲ್ಲಿ ನಡೆಯುತ್ತಿರುವ ವಿಶ್ವ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ನಿರಾಶದಾಯಕ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನ ತಂಡ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆ ಕಳೆದು ಕೊಂಡಿತು.ಪಾಕಿಸ್ತಾನ ಹಾಕಿ ಇತಿಹಾಸದಲ್ಲೇ ಹೀಗಾಗಿರುವುದು ಇದೇ ಮೊದಲು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಶುಕ್ರವಾರವಷ್ಟೇ ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿ ವಿಶ್ವ ಹಾಕಿ ಲೀಗ್ ನಲ್ಲಿ ಪಾಕಿಸ್ತಾನ ತಂಡದ ಪೇಲವ ಪ್ರದರ್ಶನದ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚುವಂತೆ ಸೂಚಿಸಿದರು. ಅಲ್ಲದೇ ರಾಷ್ಟ್ರೀಯ ಹಾಕಿ ತಂಡದ ಆಯ್ಕೆ ಮಂಡಳಿ ಅಧ್ಯಕ್ಷ ಇಸ್ಲಾಹುದ್ದೀನ್ ಸಿದ್ದಿಕಿ ಹಾಗೂ ಇತರ ಸದಸ್ಯರು ರಾಜೀನಾಮೆ ನೀಡಿದ್ದಾರೆ.