ದುಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡ ಪಾಕಿಸ್ತಾನ ತಂಡಕ್ಕೆ ಐಸಿಸಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಭಾರಿ ಬಡ್ತಿ ಸಿಕ್ಕಿದೆ. ಈ ಮೊದಲು ರ್ಯಾಂಕಿಂಗ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ಅದು ಮಂಗಳವಾರ ಪ್ರಕಟಗೊಂಡ ಹೊಸ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಇದರಿಂದ ಭಾರತ 5ನೇ ಸ್ಥಾನಕ್ಕೆ ಕುಸಿದಿದೆ.
ಲಂಕಾ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ 97ನೇ ಅಂಕಗಳನ್ನು ಪಡೆದಿದ್ದ ಪಾಕಿಸ್ತಾನ, ಸರಣಿ ಗೆದ್ದ ಕೂಡಲೇ ನಾಲ್ಕು ಅಂಕಗಳನ್ನು ಪಡೆದು ಇಂಗ್ಲೆಂಡ್, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದಿದೆ.
ಪಾಕಿಸ್ತಾನಕ್ಕಿಂತ ಕೇವಲ 2 ಅಂಕಗಳ ಹಿನ್ನಡೆ ಹೊಂದಿರುವ ನ್ಯೂಜಿಲೆಂಡ್, ಪಟ್ಟಿಯ ಮೂರನೇ ಸ್ತಾನದಲ್ಲಿದ್ದರೆ, ಹತ್ತು ಅಂಕ ಮುಂದಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಇನ್ನು, 130 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯ ಸೋಲು, ಶ್ರೀಲಂಕಾಕ್ಕೆ ನಾಲ್ಕು ಅಂಕಗಳ ನಷ್ಟವನ್ನು ತಂದಿದ್ದರೂ, ಹಿಂದೆ ಇದ್ದ 7ನೇ ಸ್ಥಾನ-ದಲ್ಲಿ ಅದು ಮುಂದುವರಿದಿದೆ.