ಲಂಡನ್: ವಿಶ್ವದ ಮಾಜಿ ನಂ.1 ಟೆನಿಸ್ ಪಟು ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಹಾಗೂ ಬ್ರಿಟನ್‍ನ ನಂ.1 ಆಟಗಾರ ಆಂಡಿ ಮರ್ರೆ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಉಪಾಂತ್ಯಕ್ಕೆ ಲಗ್ಗೆ ಹಾಕಿದ್ದಾರೆ. ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಸೆಮೀಸ್‍ಗೆ ಕಾಲಿಟ್ಟಿದೆ. ಆದರೆ, ಸ್ವಿಜರ್ಲೆಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕಾ, ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡು, ನಿರಾಸೆ ಅನುಭವಿಸಿದ್ದಾರೆ.
ಫೆಡರರ್ ಗೆ ಜಯ: ಬುಧವಾರ ಇಲ್ಲಿನ ನಂ. 1 ಕೋರ್ಟ್‍ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ 17 ಗ್ರಾಂಡ್‍ಸ್ಲಾಂ ಪ್ರಶಸ್ತಿಗಳ ಒಡೆಯ ಹಾಗೂ ಎರಡನೇ ಶ್ರೇಯಾಂಕಿತ ಹಾಗೂ ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಫ್ರಾನ್ಸ್ ನ ಗಿಲೆಸ್ ಸೈಮನ್ ವಿರುದ್ದ 6-3, 7-5, 5-2 ನೇರ ಸೆಟ್ ಗಳಲ್ಲಿ ಜಯಿಸಿ ಉಪಾಂತ್ಯಕ್ಕೆ ಅರ್ಹತೆ ಗಿಟ್ಟಿಸಿ ದರು. ಸಾನಿಯಾಗೆ ಜಯ:ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ, ಕಜಕಿಸ್ತಾನದ ಶ್ವೆಡೊವಾ ಮತ್ತು ಆಸ್ಟೇಲಿಯಾದ ಡೆಲ್ಲಾಕ್ವಾ ಜೋಡಿ ವಿರದ್ಧ 7-5, 6-3 ಸೆಟ್ಗಳ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮೀಸ್‍ಗೆ ಜೊಕೊ: ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್, ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಸೆಣಸಿದ ಅವರು, 6-4, 6-4, 6-4 ನೇರ ಸೆಟ್ಗಳಿಂದ ಜಯ ಸಾಧಿಸಿ, ಉಪಾಂತ್ಯಕ್ಕೆ ಲಗ್ಗೆಯಿಟ್ಟರು.
ಆಂಡಿ ಮರ್ರೆಗೆ ಗೆಲುವು: ಮತ್ತೊಂದು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ಆಂಡಿ ಮರ್ರೆ ಕೆನಡಾದ ವಸೆಕ್ ಪಾಸ್ಪಿಸಿಲ್ ವಿರುದ್ಧ 6--4, 7-5, 6-4 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು.
ವಾವ್ರಿಂಕಾಗೆ ಆಘಾತ: ಈ ವರ್ಷದ ಪ್ರೆಂಚ್ ಓಪನ್ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ ಅವರು ವಿಂಬಲ್ಡನ್‍ನ ಕ್ವಾರ್ಟರ್ ಫೈನಲ್ ನಲ್ಲಿ ಸೋಲಿನ ಆಘಾತ ಅನುಭವಿಸಿದರು. ಸುಮಾರು ಮೂರೂವರೆ ಗಂಟೆ ಕಾಲ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ಅವರು, 4--6, 6-4, 6-3, 4-6, 9-1 ಸೆಟ್ ಗಳ ಅಂತರದಲ್ಲಿ ಸೋತರು. ಸುದೀರ್ಘವಾಗಿ ನಡೆದ 5ನೇ ಸೆಟ್ ರೋಚಕವಾಗಿತ್ತು.