ದಾವಣಗೆರೆ: ಅಮೆರಿಕ ಲಾಸ್ ವೆಗಾಸ್ ನಲ್ಲಿ ಸೆ.7ರಿಂದ 12ರವರೆಗೆ ನಡೆಯುವ ವಿಶ್ವ ಕುಸ್ತಿ ಪಂದ್ಯಾವಳಿ-2015ರಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ನಗರ ಕ್ರೀಡಾ ನಿಲಯದ ಕುಸ್ತಿಪಟು ರಫೀಕ್ ಹೋಳಿ ಸ್ಥಾನ ಪಡೆದಿದ್ದಾರೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕುಸ್ತಿ ತರಬೇತುದಾರ ಆರ್. ಶಿವಾನಂದ ತಿಳಿಸಿದರು.
ಧಾರವಾಡ ಜಿಲ್ಲೆ ಸಿಂಗನಹಳ್ಳಿಯ ರಫೀಕ್ ಹೋಳಿ, ದಾವಣಗೆರೆ ಕ್ರೀಡಾ ನಿಲಯದಲ್ಲಿ ತರಬೇತಿ ಪಡೆದ ಕುಸ್ತಿಪಟು, ಈಗ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಳಿ ವಿಶ್ವ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾದ ರಾಜ್ಯದ 2ನೇ ಕುಸ್ತಿಪಟುವೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಹೇಳಿದರು.
25 ವರ್ಷದ ಹಿಂದೆ ಎಂ.ಆರ್.ಪಾಟೀಲ್ ಆಯ್ಕೆಯಾಗಿದ್ದರು. ಅದನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಇಂತಹ ಅವಕಾಶ ಸಿಕ್ಕಿರಲಿಲ್ಲ. ಇದೀಗ ರಫೀಕ್ ಹೋಳಿ ಅಂತಹ ಅವಕಾಶ ಪಡೆದಿದ್ದು, ವಿಶ್ವ ಕುಸ್ತಿ ಪಂದ್ಯಾವಳಿಯಲ್ಲಿ ರಫೀಕ್ ಹೋಳಿ ಅತ್ಯುತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದರು.
ದೇಶದ ಇತರೆ ರಾಜ್ಯಗಳಲ್ಲಿ ಕುಸ್ತಿ ಹಾಗೂ ಕುಸ್ತಿಪಟುಗಳಿಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತವೆ. ಪದಕ ವಿಜೇತರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಕರ್ನಾಟಕದಲ್ಲಿ ಅಂತಹ ಪ್ರೋತ್ಸಾಹ, ಸ್ಪಂದನೆ ಇಲ್ಲ. ಹಿಂದೆ ಇದ್ದ ಮೀಸಲಾತಿ ಸಹ ತೆಗೆದು ಹಾಕಲಾಗಿದೆ. ಕುಸ್ತಿಪಟುಗಳಿಗೆ ಇದರಿಂದ ಅನ್ಯಾಯವಾಗುತ್ತಿದ್ದು, ಸರ್ಕಾರ ಇದರತ್ತ ಗಮನ ಹರಿಸಬೇಕು.
-ಆರ್. ಸುರೇಶ್ ನಾಯ್ಕ, ಹಿರಿಯ ಕುಸ್ತಿಪಟು