ನವದೆಹಲಿ: ಐಪಿಎಲ್ ವೇಳೆ ಸಹ ಆಟಗಾರನಿಗೆ ಮೋಸ ದಾಟದ ಆಮಿಷ ಒಡ್ಡಿದ ಹಿನ್ನೆಲೆಯಲ್ಲಿ ಮುಂಬೈ ರಣಜಿ ಆಟಗಾರ ಹಿಕೆನ್ ಶಾ ಅವರನ್ನು ತಕ್ಷಣವೇ ಬಿ ಸಿ ಸಿ ಐ ಅಮಾನತುಗೊಳಿಸಿದೆ. ಹಿಕೆನ್ ಶಾ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಈ ನಿರ್ಧಾರ ತಳೆಯಲಾಗಿದ್ದು, ಮುಂದಿನ ಕ್ರಮವನ್ನು ಶಿಸ್ತು ಸಮಿತಿ ತೆಗೆದುಕೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ.
``ಮುಂಬೈ ಕ್ರಿಕೆಟರ್ ಹಿಕೆನ್ ಶಾ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲು ಬಿಸಿಸಿಐ ಇಚ್ಛಿಸುತ್ತದೆ. ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ನಿಯಮ ಉಲ್ಲಂಘನೆಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ'' ಎಂದು ಮಂಡಳಿಯ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
``ಬಿಸಿಸಿಐನ ಶಿಸ್ತು ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಹಿಕೆನ್ ಬಿಸಿಸಿಐಗೆ ಸಂಬಂಧಿಸಿದ ಯಾವುದೇ ಮಾದರಿಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳುವಂತಿಲ್ಲ'' ಎಂದು ಹೇಳಲಾಗಿದೆ. 30 ವರ್ಷದ ಹಿಕೆನ್, ಮುಂಬೈ ಪರ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 42.35 ಸರಾಸರಿಯಲ್ಲಿ 2160 ರನ್ ದಾಖಲಿಸಿದ್ದಾರೆ. ಹಿಕೆನ್ ಐಪಿ ಎಲ್‍ನ ಯಾವುದೇ ಮಾದರಿಯಲ್ಲಿ ಭಾಗವಹಿಸದಿದ್ದರೂ ರಾಜಸ್ಥಾನ ರಾಯಲ್ಸ್ ನ ಪ್ರವೀಣ್ ತಾಂಬೆ ಅವರಿಗೆ ಮೋಸದಾಟದ ಆಮಿಷ ಒಡ್ಡಿದ್ದರೆಂಬುದು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.