ಬೆಂಗಳೂರು: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಪ್ರವಾಸಿ ನ್ಯೂಜಿಲೆಂಡ್ ತಂಡ, ಭಾರತ ವನಿತಾ ತಂಡದ ವಿರುದ್ಧ ಎರಡನೇ ಟಿ 20 ಪಂದ್ಯದಲ್ಲಿ ಗೆಲುವು ದಾಖಲಿಸಿ ಆ ಮೂಲಕ ಮೂರು ಚುಟುಕು ಪಂದ್ಯ ಸರಣಿಯನ್ನು 2-0 ಅಂತರದಿಂದ ತನ್ನ ಸುಪರ್ದಿಗೆ ತಂದುಕೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟ್‍ಗಳ ಪರಾಭವ ಕಂಡಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮಿಥಾಲಿ ರಾಜ್ ನೇತೃತ್ವದ ಭಾರತ ವನಿತಾ ತಂಡ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಸಂಪಾದಿಸಿತು. ಇದಕ್ಕೆ ಪ್ರತಿಯಾಗಿ ನ್ಯೂಜಿ ಲೆಂಡ್ 17.5 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 139 ರನ್ ದಾಖಲಿಸಿ ಸುಲಭ ಗೆಲುವು ತನ್ನದಾಗಿಸಿತು. ಮೊದಲ ಪಂದ್ಯದಲ್ಲಿ ಅಬ್ಬರದ ಆಟವಾಡಿ ಭಾರತ ತಂಡವನ್ನು ಸುಲಭವಾಗಿ ಮಣಿಸಿದ್ದ ನ್ಯೂಜಿಲೆಂಡ್, ಈ ಪಂದ್ಯದಲ್ಲೂ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯಿತು. ಅಲ್ಲದೆ ಕಳೆದ ಪಂದ್ಯದ ರೀತಿಯಲ್ಲಿ ಎಲ್ಲ ವಿಭಾಗದಲ್ಲೂ ಶಿಸ್ತುಬದ್ಧ ದಾಳಿ ಸಂಘಟಿಸಿ ಭಾರತ ವನಿತೆಯರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಆರಂಭಿಕ ಕುಸಿತ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ತಂಡದ ನಾಯಕಿ ಮಿಥಾಲಿ ರಾಜ್ (1) ಮೊದಲ ಓವರ್ ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಲತಿಕಾ ಕುಮಾರಿ (4) ಸಹ ಬೇಗ ನಿರ್ಗಮಿಸುವುದರೊಂದಿಗೆ ಭಾರತ 9 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಈ ವೇಳೆ ಇನಿಂಗ್ಸ್ ಕಟ್ಟಲು ಮುಂದಾದ ವಿ.ವನಿತಾ (41) ಹಾಗೂ ಹರ್ಮನ್ ಪ್ರೀತ್ ಕೌರ್ (30) ತಂಡವನ್ನು ಕುಸಿತದಿಂದ ಮೇಲೆತ್ತುವ ಪ್ರಯತ್ನ ನಡೆಸಿದರು. ಈ ಇಬ್ಬರು ಆಟಗಾರ್ತಿಯರು ಉತ್ತಮ ಆರಂಭ ಪಡೆದು ಕ್ರೀಸ್‍ನಲ್ಲಿ ನೆಲಕಚ್ಚಿ ಆಡುವ ಸೂಚನೆ ನೀಡುತ್ತಿರುವಾಗಲೇ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ಮತ್ತೆ ಹಿನ್ನಡೆ ಯಾಯಿತು. ನಂತರ ಬಂದ ವೇದಾ ಕೃಷ್ಣಮೂರ್ತಿ (29), ಜುಲನ್ ಗೋಸ್ವಾಮಿ (14), ಸುಷ್ಮಾ ವರ್ಮಾ (ಅಜೇಯ 10), ಶುಭಲಕ್ಷ್ಮಿ ಶರ್ಮಾ (ಅಜೇಯ 1) ರನ್ ಗಳಿಸಿದರು. ನ್ಯೂಜಿಲೆಂಡ್ ತಂಡದ ಪರ ಸೋಫಿಯಾ ಡಿವೈನ್ 2, ಬ್ರಾಡ್ ಮೋರ್ ಹಾಗೂ ರೋವ್ ತಲಾ 1 ವಿಕೆಟ್ ಪಡೆದರು.
ಗಮನ ಸೆಳೆದ ಪ್ರೀಸ್ಟ್: ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ರನ್ ಖಾತೆ ತೆರೆಯುವ ಮುನ್ನವೇ ನಾಯಕಿ ಸೂಜಿ ಬೇಟ್ಸ್ ವಿಕೆಟ್ ಕಳೆದುಕೊಂಡಿತು. ನಂತರ 14 ರನ್ ಗಳಿಸಿದ್ದ ಸೋಫಿಯಾ ಡಿವೈನ್ ಸಹ ಔಟಾಗುವ ಮೂಲಕ ನ್ಯೂಜಿಲೆಂಡ್ ಪಾಳೆಯದಲ್ಲಿ ಭೀತಿ ಎದುರಾಯಿತು. ಈ ವೇಳೆ ಸಮಯೋಚಿತ ಬ್ಯಾಟಿಂಗ್ ಮಾಡಿದ ರಾಚೆಲ್ ಪ್ರೀಸ್ಟ್ ಕೇವಲ 34 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಗಳಿಸಿ ಪಂದ್ಯವನ್ನು ಭಾರತದಿಂದ ಕಿತ್ತುಕೊಂಡರು. ನಂತರ ಬಂದ ಕ್ಯಾಸ್ಪೆರೆಕ್ (15), ಸ್ಯಾಟರ್‍ವೈಟ್ (ಅಜೆಯ 24) ಮತ್ತು ಸ್ಯಾಟರ್ ವೈಟ್( ಅಜೇಯ24) ಮತ್ತಪ ರೆರ್ಕಿನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ತಂಡದ ಪರ ಜುಲನ್ ಗೋಸ್ವಾಮಿ 2, ಪೂನಮ್ ಯಾದವ್ ಹಾಗೂ ರಾಜೇಶ್ವರಿ ಗಾಯಕ್ ವಾಡ್ ತಲಾ 1 ವಿಕೆಟ್ ಪಡೆದರು.