ಲಂಡನ್ : ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ತಂದು ಕೊಟ್ಟ ಭಾರತದ ಟೆನಿಸ್ ತಾರೆಗಳಾದ ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ ಹಾಗೂ ಯುವ ಆಟಗಾರ ಸುಮಿತ್ ನಗಾಲ್ ಅವರಿಗೆ ಕ್ರಿಕೆಟ್ ದಿಗ್ಜಜ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. 17 ವರ್ಷದ ದೆಹಲಿ ಆಟಗಾರ ಸುಮಿತ್ ನಗಾಲ್ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್‍ಸ್ಲಾಮ್ ಟೂರ್ನಿಯ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಆರನೇ ಭಾರತೀಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದರು.
``ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಮತ್ತೊಂದು ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಗೆದ್ದಿದ್ದಕ್ಕೆ ಅಭಿನಂದನೆಗಳು. ನೀವು ಯುವ ಆಟಗಾರರಿಗೆ ಅತ್ಯದ್ಭುತ ಸ್ಫೂರ್ತಿಯಾಗಿದ್ದೀರಿ'' ಎಂದು ಪೇಸ್ ಗೆಲುವಿಗೆ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್‍ನಲ್ಲಿ ಅಭಿನಂದಿಸಿದ್ದಾರೆ.
``ವಿಂಬಲ್ಡನ್ 2015ರಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ರೋಫಿಗಳು ನಿಮ್ಮದಾಗಲಿ. ನಾವೆಲ್ಲ ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು'' ಎಂದು ಸಚಿನ್ ಸಾನಿಯಾ ಗೆಲುವಿಗೂ ಸಂತಸ ವ್ಯಕ್ತಪಡಿಸಿದ್ದಾರೆ.
``ವಿಂಬಲ್ಡನ್ ಬಾಲಕರ ಡಬಲ್ಸ್ ಪ್ರಶಸ್ತಿ ಗೆದ್ದ ಸುಮಿತ್ ನಗಾಲ್‍ಗೆ ಅಭಿನಂದನೆಗಳು. ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಸಾಕಷ್ಟು ಶ್ರಮ ಹಾಕಿ ನಿಮ್ಮ ಕನಸನ್ನು ನನಸಾಗಿಸಿ'' ಎಂದು ಸಚಿನ್ ಯುವ ಆಟಗಾರ ನಿಗೂ ಸಚಿನ್ ಶುಭೈ ಹಾರೈಸಿದ್ದಾರೆ.