ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ನ್ಯಾ. ಲೋಧಾ ಸಮಿತಿ ನೀಡಿರುವ ತೀರ್ಪಿನ ನಡೆ ಭಾರತ ಕ್ರಿಕೆಟ್ ನಲ್ಲಿ ಕೈಗೊಂಡ ಮೊಟ್ಟ ಮೊದಲ ಪ್ರಾಮಾಣಿಕ ತೀರ್ಪು ಎಂದು ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಬಣ್ಣಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
``ಲೋಧಾ ಸಮಿತಿ ವರದಿ ಕೇವಲ ಮೊದಲ ಹೆಜ್ಜೆಯಾಗಿದೆ. ಇದು ಕೇವಲ ಅಂತ್ಯವಲ್ಲ, ಆರಂಭಿಕ ಹಂತ. ನ್ಯಾಯಾಂಗದಿಂದ ಅತ್ಯುತ್ತಮ ತೀರ್ಪು ಹೊರಬಂದಿದೆ. ಭಾರತೀಯ ಕ್ರಿಕೆಟ್ ಪಾಲಿಗಂತೂ ಇದು ಮೊಟ್ಟ ಮೊದಲ ಪ್ರಾಮಾಣಿಕ ನಿರ್ಧಾರವಾಗಿದ್ದು, ಇದು ಬಿಸಿಸಿಐನ ಹೊರತಾಗಿ ಬಂದಿದೆ. ಸಿಎಸ್‍ಕೆ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಅಲ್ಪ ಪ್ರಮಾಣದ ಶಿಕ್ಷೆ ಪಡೆದು ಪಾರಾಗಿವೆ. ಈ ಎರಡು ತಂಡಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಬೇಕಿತ್ತು'' ಎಂದು ಲಲಿತ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.
``ನ್ಯಾಯಾಲಯದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಬಿಸಿಸಿಐ ಮುಚ್ಚಿ ಹಾಕಿದ್ದ ಹುಳುಕು ಬೆಳಕಿಗೆ ಬಂದಿದೆ. ಸಾರ್ವಜನಿಕ ಸಂಸ್ಥೆಯಾಗಿ ಬಿಸಿಸಿಐ ಈ ರೀತಿಯಾಗಿ ಕಾರ್ಯ ನಿರ್ವಹಿಸಿರುವುದಕ್ಕೆ ನಾಚಿಕೆಪಡಬೇಕು. ಬಿಸಿಸಿಐ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಜನರ ವಿಶ್ವಾಸಗಳಿಸಬೇಕು. ಅದರ ಹೊರತಾಗಿ ಶ್ರೀನಿವಾಸನ್ ಹಾಗೂ ಅವರ ಬೆಂಬಲಿಗರ ಹಗರಣಗಳ ಸಂಸ್ಥೆಯಾಗಬಾರದು. ಶ್ರೀನಿವಾಸನ್ ಐಸಿಸಿ ಮುಖ್ಯಸ್ಥರಾಗಿ ಮುಂದುವರಿಯಲು ಯಾವುದೇ ಹಕ್ಕಿಲ್ಲ. ಐಸಿಸಿಯ ನಿಯಮಾವಳಿಯನ್ನು ಅರಿಯಬೇಕಿದೆ. ಎಲ್ಲ ಐಸಿಸಿ ಸದಸ್ಯರು ಎಚ್ಚೆತ್ತು ಕೊಳ್ಳಬೇಕು'' ಎಂದರು.