ಕ್ರೈಸ್ಟ್ ಚರ್ಚ್: ಪ್ರತಿಷ್ಠಿತ ಡೇವಿಸ್ ಕಪ್ ಏಷ್ಯಾ ಒಷೇನಿಯಾ ಗುಂಪು ನ್ಯೂಜಿಲೆಂಡ್ ಒಂದರ ಪಂದ್ಯಾವಳಿಯು ಶುಕ್ರವಾರದಿಂದ ಆರಂಭವಾಗುತ್ತಿದ್ದು, ಭಾರತದ ಟೆನಿಸ್ ತಂಡ ವಿಶ್ವ ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.
ಆಟಗಾರರಿಗಿಂತಲೂ ಶೀತಲ ವಾತಾವರಣದ ಸವಾಲು ಭಾರತ ತಂಡವನ್ನು ಕಾಡಲಿದ್ದು, ವಾಸ್ತವವಾಗಿ ವಿಲ್ಡಿಂಗ್ ಪಾರ್ಕ್ ಟೆನಿಸ್ ಕೋರ್ಟ್ ಒಳಾಂಗಣವಾಗಿದ್ದರೂ, ಕೇವಲ 5ರಿಂದ 7 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮೆಟ್ಟಿನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಉಭಯರ ನಡುವಿನ ಸೆಣಸಾಟದಲ್ಲಿ ಗೆಲುವು ಸಾ„ಸಿದವರು ವಿಶ್ವ ಪ್ಲೇ-ಆಫ್ ಗೆ ಸ್ಥಾನ ಪಡೆಯುವುದು ಖಾತ್ರಿಯಾಗಲಿದೆ. ಮೇಲ್ನೋಟಕ್ಕೆ ಭಾರತ ಆತಿಥೇಯ ತಂಡಕ್ಕಿಂತ ಬಲಿಷ್ಟವಾಗಿದೆ.
ಸಿಂಗಲ್ಸ್ ನಲ್ಲಿ ಸೋಮ್ ದೇವ್ ದೇವ್‍ವರ್ಮನ್(148ನೇ ಶ್ರೇಯಾಂಕ), ಯೂಕಿ ಭಾಂಬ್ರಿ(151ನೇ ಶ್ರೇಯಾಂಕ) ಸ್ಥಳೀಯ ಆಟಗಾರರಿಗಿಂತಲೂ ವಿಶ್ವ ರ್ಯಾಂಕಿಂಗ್‍ನಲ್ಲಿ ಮೇಲಿನ ಸ್ತರದಲ್ಲಿದ್ದಾರೆ. ಇನ್ನು ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ರೋಹನ್ ಬೋಪಣ್ಣ ಕೂಡ ಆತಿಥೇಯರಿಗೆ ಸವಾಲಾಗಿ ಪರಿಣಮಿಸಲಿದ್ದಾರೆ. ವಿಶ್ವ ಡಬಲ್ಸ್ ವೈಯಕ್ತಿಕ ರ್ಯಾಂಕಿಂಗ್‍ನಲ್ಲಿ 10ನೇ ಶ್ರೇಯಾಂಕ ಹೊಂದಿರುವ ಬೋಪಣ್ಣ ಈ ಟೂರ್ನಿಯಲ್ಲಿ ಸಾಕೇತ್ ಮೈನೇನಿ ಜತೆಗೂಡಿ ಕಾದಾಡಲಿದ್ದಾರೆ.
ಅಂದ್ಹಾಗೆ ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ವಿರುದ್ಧ ಭಾರತ 5-0ಯಿಂದ ವಿಜೃಂಭಿಸಿತ್ತು. ಇನ್ನು ಕಳೆದ ನಾಲ್ಕು ಹಣಾಹಣಿಯಲ್ಲಿ ಭಾರತ ಅಜೇಯವಾಗಿರುವುದು ಕೂಡ ಅದರ ಬಲಾಢ್ಯತೆಗೆ ಸಾಕ್ಷಿಯಾಗಿದೆ. 1970ರಲ್ಲಿ ಒಮ್ಮೆ ಮಾತ್ರ ಭಾರತ, ಕಿವೀಸ್ ವಿರುದ್ಧ ಸೋಲಪ್ಪಿತ್ತು. ಅಂದ್ಹಾಗೆ ಶುಕ್ರವಾರ ಸಿಂಗಲ್ಸ್ ಪಂದ್ಯಗಳು ನಡೆದರೆ, ಶನಿವಾರ ಡಬಲ್ಸ್ ಹಾಗೂ ಭಾನುವಾರ ರಿವರ್ಸ್ ಸಿಂಗಲ್ಸ್ ಪಂದ್ಯಗಳು ಜರುಗಲಿವೆ. ಇಂದಿನ ಮೊದಲ ಸಿಂಗಲ್ಸ್‍ನಲ್ಲಿ ಸೋಮ್ ದೇವ್ ಮತ್ತು ವೀನಸ್ ಸೆಣಸಲಿದ್ದರೆ, ಎರಡನೇ ಸಿಂಗಲ್ಸ್‍ನಲ್ಲಿ ಜೋಸ್ ಹಾಗೂ ಯೂಕಿ ಭಾಂಬ್ರಿ ಜತೆ ಕಾದಾಡಲಿದ್ದಾರೆ.