ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಅನುಭವ ಹೊಂದಿರುವ 21 ವರ್ಷದೊಳಗಿನ ಭಾರತ ಕಿರಿಯರ ಹಾಕಿ ತಂಡ, ಶನಿವಾರದಿಂದ ಹಾಲೆಂಡ್‍ನ ಬ್ರೆಡಾದಲ್ಲಿ ಆರಂಭಗೊಳ್ಳಲಿರುವ ಪುರುಷರ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಜರ್ಮನಿಯನ್ನು ಎದುರಿಸಲಿರುವ ಭಾರತೀಯ ತರುಣರು, ಗೆಲುವಿನೊಂದಿಗೆ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸುವ ಆಶಯ ಹೊಂದಿದ್ದಾರೆಂದು `ದ ಎಕನಾಮಿಕ್ ಟೈಮ್ ' ತಿಳಿಸಿದೆ.
ಹೋಲಿಕೆ ಮಾಡಿ ನೋಡಿದರೆ, ಭಾರತ ಹಾಗೂ ಜರ್ಮನಿ ಎರಡೂ ತಂಡಗಳು ಸಮಬಲ ದಿಂದ ಕೂಡಿವೆ. ಇತ್ತಂಡ ಗಳೂ ಭರಪೂರವಾಗಿ ಪ್ರತಿಭಾನ್ವಿತ ಆಟಗಾರರನ್ನು ಹೊಂದಿವೆಯಾದರೂ, ಭಾರತ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಕಳೆದ ವರ್ಷ ನಡೆದಿದ್ದ ಸುಲ್ತಾನ್ ಜೋಹರ್ ಕಪ್ ಪಂದ್ಯಾವಳಿಯಲ್ಲಿ ಪ್ರಬಲ ತಂಡಗಳಾದ ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಸತತ 2ನೇ ಬಾರಿಗೆ ಪ್ರಶಸ್ತಿ ಬಾಚಿಕೊಂಡಿದ್ದ ಭಾರತ ಕಿರಿಯರ ಹಾಕಿ ತಂಡ ಮಾನಸಿಕವಾಗಿ ಆತ್ಮವಿಶ್ವಾಸದ ಖನಿಯಾಗಿ ಹೊರಹೊಮ್ಮಿತ್ತು.