ಮುಂಬೈ: ಬದಲಾದ ಕ್ರಿಕೆಟ್ ಕ್ರೀಡೆಗೆ ಅನುಗುಣವಾಗಿ ಹೊಸ ಪ್ರತಿಭೆಗಳನ್ನು ಶೋಧಿಸಲು ಹಾಗೂ ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸು ನಿಟ್ಟಿನಲ್ಲಿ ಹೊಸ ಟೂರ್ನಿಗಳನ್ನು ಇದೇ ವರ್ಷದಿಂದ ಬಿಸಿಸಿಐ ಜಾರಿಗೊಳಿಸಿದೆ.
ಇದರೊಂದಿಗೆ, ಹಿರಿಯ ಆಟಗಾರರ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಮಹಿಳಾ ಕ್ರಿಕೆಟ್ ಗೆ ಹೊಸ ಕಾಯಕಲ್ಪ ನೀಡುವ ದೃಷ್ಟಿಯಲ್ಲಿಯೂ ಹೊಸ ಟೂರ್ನಿಗಳನ್ನು ಪರಿಚಯಿಸಲಾಗಿದೆ. ಇದಲ್ಲದೆ, ದೇವಧರ್ ಟ್ರೋಫಿ ಹಾಗೂ ವಿಜಯ್ ಹಜಾರೆ ಪಂದ್ಯವಳಿಗಳ ಮಾದರಿಯನ್ನೂ ಬದಲಾಯಿಸಲಾಗಿದೆ.
ಕಿರಿಯರಿಗೆ ಹೊಸ ಟೂರ್ನಿ:
ಈ ಕ್ರಿಕೆಟ್ ಋತುವಿನಲ್ಲಿ ಕಿರಿಯರಿಗಾಗಿ ಹೊಸ ಟೂರ್ನಿಯನ್ನು ಆರಂಭಿಸಲಾಗಿದೆ. ಅಂಡರ್ 19 ಚಾಲೆಂಜರ್ಸ್ ಟ್ರೋಫಿ ಎಂಬ ಹೆಸರಿನ ಹೊಸ ಟೂರ್ನಿಯ ಮೊದಲ ಆವೃತ್ತಿ ಈ ವರ್ಷ ನಡೆಯಲಿದೆ. ಈ ಟೂರ್ನಿಯಲ್ಲಿ ಮೂರು ತಂಡಗಳು ಆಡಲಿವೆ. ಈ ತಂಜಗಳನ್ನು ರಾಷ್ಟ್ರೀಯ ಜೂನಿಯರ್ ಆಯ್ಕೆ ಮಂಡಳಿ ಸದಸ್ಯರು ಆರಿಸಲಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ತೋರುವ ಎಳೆಯ ಪ್ರತಿಭೆಗಳಿಗೆ ಮುಂದಿನ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಅವಕಾಶ ಸಿಗಲಿವೆ.
ಹಿರಿಯರಿಗೂ ಹೊಸ ಪಂದ್ಯಾವಳಿ ಪ್ರಸಕ್ತ ವರ್ಷದಿಂದ, ರಣಜಿ ಮಾದರಿಯಲ್ಲಿ ಹಿರಿಯರ ಏಕದಿನ ಹಾಗೂ ಟಿ20 ಮಾದರಿಯ ಟೂರ್ನಿಗಳು ನಡೆಯಲಿವೆ. ಆದರೆ, ಇದು ಅಂತರವಲಯ ಮಾದರಿಯದ್ದಲ್ಲ, ಏಕದಿನ ಹಾಗೂ ಟಿ20 ಟೂರ್ನಿಯಲ್ಲಿ ನಾಲ್ಕು ತಂಡಗಳು ಪಾಲ್ಗೊಳ್ಳಲಿದ್ದು, ಇದು ಹಿರಿಯ ಕ್ರಿಕೆಟಿಗರು ಕಳೆದೊಂದು ವರ್ಷದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಈ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಏಕದಿನ ಹಾಗೂ ಟಿ20 ಎರಡಕ್ಕೂ ಪ್ರತ್ಯೇಕವಾಗಿ ತಂಡಗಳನ್ನು ಪ್ರಕಟಿಸಲಾಗುತ್ತದೆ.
ಸಾಳ್ವೆ ಟೂರ್ನಿಯಲ್ಲೂ ಬದಲಾವಣೆ:
ಪ್ರತಿಷ್ಠಿತ ಎನ್‍ಕೆಪಿ ಸಾಳ್ವೆ ಚಾಲೆಂಜರ್ ಟ್ರೋಫಿ ಪಂದ್ಯಾವಳಿಯಲ್ಲಿ, ಇನ್ನು ಮುಂದೆ 50 ಓವರ್‍ಗಳ ನಾಲ್ಕು ಪಂದ್ಯಗಳನ್ನು ಮುಂದಿನ ವರ್ಷ ಜನವರಿ 24ರಿಂದ 28ರವರಗೆ ಆಡಿಸಲು ನಿರ್ಧರಿಸಲಾಗಿದೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಸಲಹೆಗಳ ಮೇರೆಗೆ, ಈ ಪಂದ್ಯಾವಳಿಯಲ್ಲಿ ಬದಲಾವಣೆ ಮಾಡಲಾಗಿದೆ.
ದೇವಧಾರ್ ಬದಲು:
ದೇವಧಾರ್ ಟ್ರೋಪಿsಯ ಮಾದರಿ ಬದಲಾಗಲಿದ್ದು, ಈ ಹಿಂದೆ ಇದ್ದಂತೆ ಐದು ತಂಡಗಳ ಬದಲಿಗೆ ಈ ವರ್ಷದಿಂದ ಮೂರು ತಂಡಗಳಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ವಿಜಯï ಹಜಾರೆ ಟ್ರೋಫಿ ಗೆದ್ದ ತಂಡದ ಜೊತೆಗೆ, ಎರಡು ವಿವಿಧ ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳನ್ನು ರಾಷ್ಟ್ರೀಯ ಆಯ್ಕೆ ಸಮಿತಿಯು ಆರಿಸಲಿದೆ.
ಮಹಿಳಾ ಕ್ರಿಕೆಟ್‍ಗೆ ಕಾಯಕಲ್ಪ:
ಮಹಿಳೆಯರ ಕ್ರಿಕೆಟ್ ಅಭಿವೃದ್ಧಿಗೊಳಿಸಲು ಮೂರು ಹೊಸ ಟೂರ್ನಿಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಅದರಂತೆ, 23 ವರ್ಷ ವಯೋಮಿತಿಯೊಳಗಿನ ಅಂತರ ರಾಜ್ಯ ಹಾಗೂ ಅಂತರವಲಯ ಟೂರ್ನಿಗಳಿಗೆ ಚಾಲನೆ ನೀಡಲಾಗುವುದು. ಅಲ್ಲದೆ, ಹಿರಿಯ ಆಟಗಾರ್ತಿಯರಿಗಾಗಿ ಮೂರು ದಿನಗಳ ಅಂತರ ವಲಯ ಟೂರ್ನಿಯನ್ನು ಇದೇ ವರ್ಷದಿಂದ ಆರಂಭಿಸಲಾಗುತ್ತದೆ.
ಹಜಾರೆ ಟೂರ್ನಿಯಲ್ಲೂ ಬದಲು:
ವಿಜಯ್ ಹಜಾರೆ ಟೂರ್ನಿಯ ಮಾದರಿಯಲ್ಲೂ ಬದಲಾವಣೆ ಮಾಡಲಾಗಿದ್ದು, ಈವರೆಗೆ ಇದ್ದಂತೆ ವಲಯಾಧಾರಿತ ಮಾದರಿಯನ್ನು ಕೈಬಿಟ್ಟು ಅದರ ಬದಲಿಗೆ ನಾಕೌಟ್ ಮಾದರಿಯಲ್ಲಿ ಟೂರ್ನಿಯನ್ನು ಆಡಿಸಲಾಗುವುದು. ರಣಜಿ ಟ್ರೋಫಿಯಂತೆಯೇ ಈ ಮಾದರಿಯಂತೆ ಗುಂಪುಗಳಲ್ಲಿ ತಂಡಗಳನ್ನು ವಿಭಜಿಸಲಾಗುತ್ತದೆ.