ಮಥುರಾ: ರಾಷ್ಟ್ರೀಯ ಫೆನ್ಸಿಂಗ್ ಚಾಂಪಿಯನ್ ಹೊಶಿಯಾರ್ ಸಿಂಗ್ ಕುಟುಂಬ ಸಮೇತರಾಗಿ ಕಸ್ಗಂಜ್ ನಿಂದ ಮಥುರಾಗೆ ಬರುತ್ತಿದ್ದ ಸಂದರ್ಭದಲ್ಲಿ ರೈಲ್ವೆ ಪೊಲೀಸರು ಆತನನ್ನು ರೈಲಿನಿಂದ ಹೊರನೂಕಿದ್ದು ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜನರಲ್ ಕಂಪಾರ್ಟ್ ಮೆಂಟ್ ನಲ್ಲಿದ್ದ ಹೊಶಿಯಾರ್, ಮಹಿಳಾ ಬೋಗಿಯಲ್ಲಿ ಕುಳಿತಿದ್ದ ತಾಯಿ ಮತ್ತು ಅನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಂಡು ಹೋಗಲು ಬಂದಿದ್ದಾನೆ. ಈ ವೇಳೆ ರೈಲ್ವೆ ಪೊಲೀಸರು ಮಹಿಳಾ ಬೋಗಿಯಲ್ಲಿ ಇರಬೇಕೆಂದರೆ 200 ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದಾಗ ಹೊಶಿಯಾರ್ ತಾನು ಹಣ ಕೊಡಲು ನಿರಾಕರಿಸಿದ್ದು, ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ತಿಳಿಸಿದ್ದಾನೆ. ಈ ವೇಳೆ ಕೋಪಗೊಂಡ ರೈಲ್ವೆ ಪೊಲೀಸರು ಚಲಿಸುತ್ತಿದ್ದ ರೈಲಿನಿಂದಲೇ ಹೊಶಿಯಾರ್ ನನ್ನ ಹೊರದಬ್ಬಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ರೈಲಿನಿಂದ ಕೆಳಗೆ ಬಿದ್ದ ಹೊಶಿಯಾರ್ ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸರು, ಹೊಶಿಯಾರ್ ಕಾಲು ಜಾರಿ ಬಿದ್ದಿದ್ದಾನೆ. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.