ಕೋಲ್ಕತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವಕ್ಕಾಗಿ ಆಗ್ರಹಿಸಿ ಬಿಹಾರ ಕ್ರಿಕೆಟ್ ಮಂಡಳಿಯ ಆಟಗಾರರು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ನಿವಾಸದ ಮುಂದೆ ಧರಣಿ ನಡಸಿತು. ಅಲಿಪುರ ರಸ್ತೆಯಲ್ಲಿರುವ ದಾಲ್ಮಿಯಾ ನಿವಾಸದೆದುರು ನಡೆದ ಪ್ರತಿಭಟನೆಯಲ್ಲಿ ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ ನೋಂದಾಯಿಸಲ್ಪಟ್ಟಿರುವ 100ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪಾಲ್ಗೊಂಡಿದ್ದರು.
ಪೂರ್ಣ ಪ್ರಮಾಣದ ಸದಸ್ಯತ್ವದ ಜೊತೆಗೆ ಬಿಹಾರದಲ್ಲಿ ನಿಲ್ಲಿಸಲಾಗಿರುವ ಕ್ರಿಕೆಟ್ ಟೂರ್ನಿಗಳನ್ನು ಪುನರಾರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರಲ್ಲದೆ, ಇಲ್ಲವಾದಲ್ಲಿ ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಗೆ ಬೀಗ ಜಡಿಯುವುಗಿ ಬೆದರಿಕೆ ಹಾಕಿರುವುದಾಗಿ ಪಿಟಿಐ ವರದಿ ಮಾಡಿದೆ. ಸುಮಾರು ಅರ್ಧ ಗಂಟೆವರೆಗೆ ನಡೆದ ಪ್ರತಿಭಟನೆ ನಂತರ ಪೊಲೀಸರ ಮಧ್ಯಸ್ಥಿಕಯಿಂದ ತಣ್ಣಗಾಯಿತು. ಹಿಂದೆ, ಬಿಹಾರ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಇತ್ತು. ಆದರೆ, 2001ರಲ್ಲಿ ಇದನ್ನು ರದ್ದುಗೊಳಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಬಿಹಾರದಲ್ಲಿ ಬಿಸಿಸಿಐ ವತಿ ಯಿಂದ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆದಿಲ್ಲ. ಇದರಿಂದ ಸಾವಿರಾರು ಕ್ರಿಕೆಟ್ ಆಟಗಾರರ ಭವಿಷ್ಯ ಮುರುಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.