ಜೈಪುರ: ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಬೇಕೆಂಬ ಹಠದೊಂದಿಗೆ ಆತಿಥೇಯ ಜೈಪುರ ಪಿಂಕ್‍ಪ್ಯಾಂಥರ್ಸ್ ವಿರುದ್ಧ ಕಣಕ್ಕಿಳಿದ ಪಾಟ್ನಾ ಪೈರೆಟ್ಸ್, ರೋಚಕ ಹಣಾಹಣಿಯಲ್ಲಿ ತಮ್ಮ ಜಾಣ್ಮೆಯ ಆಟ ಪ್ರದರ್ಶಿಸಿ ಜಯ ಸಾಧಿಸಿತು. ಭಾನುವಾರ ಸವಾಯ್ ಮಾನ್‍ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ತಂಡ 29-23 ಅಂಕಗಳ ಅಂತರದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಂಪಾದಿಸಿತು. ಟೂರ್ನಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಉಭಯ ತಂಡಗಳು ಸೋಲಿನ ಕಹಿ ಉಂಡಿದೆ. ಪಂದ್ಯದ ಆರಂಭಿಕ 5 ನಿಮಿಷದಲ್ಲಿ 3-2 ಅಂತರದ ಮುನ್ನಡೆ ಸಾಧಿಸಿದ್ದ ಪೈರೆಟ್ಸ್ ಪಡೆ ನಂತರದ ಹಂತದಲ್ಲಿ ಎದುರಾಳಿ ಪಡೆಯಿಂದ ಪ್ರತಿರೋಧ ಎದುರಿಸಿತು.
ಪಂದ್ಯದ ಬಹುತೇಕ ಹಂತದಲ್ಲಿ 1 ಅಥವಾ 2 ಅಂಕಗಳ ಅಂತರದಲ್ಲಿ ಉಭಯ ತಂಡಗಳು ಮೇಲುಗೈ ಸಾಧಿಸುತ್ತ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. ಉಭಯ ತಂಡಗಳ ಪೈಪೊಟಿ ತೀವ್ರವಾಗಿದ್ದ ಪರಿಣಾಮ ಪಿಂಕ್ ಪ್ಯಾಂಥರ್ಸ್ ಪಂದ್ಯದ ಮೊದಲಾರ್ಧದಲ್ಲಿ 11 10 ಅಂತರದ ಅಲ್ಪ ಮುನ್ನಡೆ ಸಾಧಿಸಿತ್ತು. ಪಂದ್ಯದ ಕಡೇಯ ಐದು ನಿಮಿಷದ ಆಟ ಬಾಕಿ ಉಳಿದಿದ್ದಾಗ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಈ ಹಂತದಲ್ಲಿ ಜೈಪುರ ತಂಡದ ರೈಡರ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಪಾಟ್ನಾ ರಕ್ಷಣಾತ್ಮಕ ವಿಭಾಗ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು.
ಮುಂಬೈ ಅಜೇಯ ಯಾತ್ರೆ: ಪ್ರಸಕ್ತ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಯುಮುಂಬಾ ತಂಡ ತನ್ನ ಅಜೇಯ ಯಾತ್ರೆ ಮುಂದುವರಿಸಿದೆ. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 27-26 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಪಂದ್ಯದ ಆರಂಭದಲ್ಲಿ ಮುಂಬೈ ತಂಡ ಹಿನ್ನಡೆ ಅನುಭವಿಸಿತ್ತಾದರೂ ಅಂತಿಮ ಹಂತದಲ್ಲಿ ಹೋರಾಟಕಾರಿ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿತು. ತೆಲುಗು ಟೈಟಾನ್ಸ್ ತಂಡ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತಾದರೂ ಈ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಲ್ಲಿ ಮೊದಲ ಆಘಾತ ಅನುಭವಿಸಿತು.
ನಿಲೇಶ್ ಶಿಂದೆಗೆ ಗಾಯ
ಕೊಲ್ಕೋತಾ: ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ನ ರಕ್ಷಣಾತ್ಮಕ ಆಟಗಾರ ನಿಲೇಶ್ ಶಿಂದೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಶನಿವಾರ ನಡೆದ ಪಂದ್ಯದ ವೇಳೆ ಬೆನ್ನು ನೋವಿಗೆ ಸಿಲುಕಿದ ನಿಲೇಷ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಒಂದು ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. 2 ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.