ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಖುಲಾಸೆಗೊಂಡಿರುವ ಶ್ರೀಶಾಂತ್, ಅಜಿತ್ ಚಂಡಿಲಾ ಮತ್ತು ಅಂಕಿತ್ ಚೌಹಾಣ್ ಅವರ ಮೇಲೆ ಹೇರಿರುವ ನಿಷೇಧವನ್ನು ತೆರವು ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದೆ.
2013ರಲ್ಲಿ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯ 6ನೇ ಆವೃತ್ತಿ ಸಂದರ್ಭ ಸ್ಫೋಟಗೊಂಡ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾಗಿದ್ದ ಎಸ್. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡೀಲಾ ಸಹಿತ 36 ಮಂದಿಯನ್ನು ದೆಹಲಿಯ ಸ್ಥಳೀಯ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಆದರೆ, ಬಿಸಿಸಿಐ ಮಾತ್ರ, ಶ್ರೀಶಾಂತ್ ಹಾಗೂ ಅಂಕಿತ್ ಚವಾಣ್ ಮೇಲೆ ಹೇರಿರುವ ಆಜೀವ ನಿಷೇಧ ಸದ್ಯಕ್ಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಶಿಸ್ತು ಕ್ರಮಕ್ಕೂ, ಅಪರಾಧಕ್ಕೆ ಕೈಗೊಳ್ಳುವ ಕ್ರಮಕ್ಕೂ ವ್ಯತ್ಯಾಸವಿದೆ. ಎರಡು ವಿಭಿನ್ನವಾಗಿದೆ. ಈ ಆಟಗಾರರ ಅಶಿಸ್ತಿನಿಂದಾಗಿ ಶಿಸ್ತು ಕ್ರಮಕೈಗೊಳ್ಳಲಾಗಿದೆ. ಹಾಗಾಗಿ, ಅವರ ಮೇಲೆ ಹೇರಿರುವ ನಿಷೇಧ ಮುಂದುವರೆಯಲಿದೆ ಎಂದು ಮಂಡಳಿ ಕಾರ್ಯದರ್ಶಿ ಅನುರಾಗ್ ಠಾಕೂರ್ಹೇಳಿದ್ದಾರೆ.
ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಿಸಿಸಿಐ ನಡೆಸಿದ ಬಿಸಿಸಿಐ ತನಿಖಾ ವರದಿಯಲ್ಲಿ ತಪ್ಪಿತಸ್ಥರು ಎಂದು ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಬಿಸಿಸಿಐ ಶ್ರೀಶಾಂತ್, ಅಜಿತ್ ಚಂಡಿಲಾ, ಅಂಕಿತ್ ಚೌಹಾಣ್ ಅವರ ಮೇಲೆ ಆಜೀವ ನಿಷೇಧ ಹೇರಿತ್ತು.