ಚೆನ್ನೈ: ಪ್ರವಾಸಿ ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವು ಬುಧವಾರದಿಂದ ಶುರುವಾಗುತ್ತಿದ್ದು, ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದ ಕೇಂದ್ರಬಿಂದುವಾಗಿದ್ದಾರೆ.
ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಅನೌಪಚಾರಿಕ ಪಂದ್ಯದಲ್ಲಿ, ಜಯ ಗಳಿಸುವ ಇರಾದೆಯಲ್ಲಿ ನಾಯಕ ಪೂಜಾರ ಇದ್ದಾರೆ. ಇತ್ತಂಡಗಳ ನಡುವಿನ ಮೊದಲ ಪಂದ್ಯ ಡ್ರಾ ಆಗಿತ್ತು. ಮುಂದಿನ ತಿಂಗಳು, ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ, ತಮ್ಮ ಟೆಸ್ಟ್ ಕ್ರಿಕೆಟ್‍ನಲ್ಲಿನ ಪ್ರದರ್ಶನವನ್ನು ಇನ್ನಷ್ಟು ಹುರಿಗೊಳಿಸುವ ಉದ್ದೇಶದಿಂದ ಕೊಹ್ಲಿ ಈ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಇದು ಕೇವಲ ಭಾರತ ತಂಡಕ್ಕಷ್ಟೇ ಅಲ್ಲ, ಎದುರಾಳಿ ಆಸೀಸ್ ತಂಡದಲ್ಲೂ ಮಿಂಚು ಹರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ 'ಎ' ತಂಡದ ಆಟಗಾರ ಆ್ಯಶ್ಟನ್ ಅಗರ್, ವಿರಾಟ್ ಕೊಹ್ಲಿಯಂಥ ಆಟಗಾರರ ಎದುರು ಆಡಲು ಎಲ್ಲರೂ ಇಷ್ಟಪಡುತ್ತಾರೆ ಎಂದಿದ್ದಾರೆ.
ಹಾಗಾಗಿ, ಉಭಯ ತಂಡಗಳ ನಡುವಿನ ಈ ಪಂದ್ಯ ಸಾಕಷ್ಟು ರೋಚಕ ಹಾಗೂ ಕುತೂಹಲ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಕಳೆದ ವಾರ ಮುಕ್ತಾಯಗೊಂಡ ಮೊದಲನೇ ಟೆಸ್ಟ್ ಪಂದ್ಯದ ವೇಳೆ, ಚೇಪಕ್ ಕ್ರೀಡಾಂಗಣದ ಪಿಚ್ ವೇಗದ ಬೌಲರ್‍ಗಳ ಪಾಲಿಗೆ ಅಷ್ಟು ಹಿತವಾಗಿರಲಿಲ್ಲ. ಅಲ್ಲದೆ, ಭಾರತ ಹಾಗೂ ಆಸ್ಟ್ರೇಲಿಯಾ 'ಎ' ತಂಡಗಳ ನಾಯಕರು,
ಅದೊಂದು ನಿಧಾನಗತಿಯ ಪಿಚ್ ಎಂದಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರೌಂಡ್‍ಮನ್‍ಗಳು ಕಳೆದ ಮೂರು ದಿನಗಳಿಂದ
ಪಿಚ್ ಅನ್ನು ಸ್ಪರ್ಧಾತ್ಮಕ ಪಂದ್ಯಕ್ಕೆ ಅಣಿಗೊಳಿಸುತ್ತಿದ್ದಾರೆ.
ರಾಹುಲ್‍ಗೆ ವಿಶ್ರಾಂತಿ: ಏತನ್ಮಧ್ಯೆ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕರ್ನಾಟಕದ ಕೆ.ಎಲ್. ರಾಹುಲ್‍ಗೆ ಈ ಎರಡನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಬದಲಾದ ಈ ಸ್ಥಿತಿಯಲ್ಲಿ ತಂಡದ ಆರಂಭಿಕನ ಸ್ಥಾನವನ್ನು ನಾಯಕ ಚೇತೇಶ್ವರ ಪೂಜಾರ ಅವರೇ ವಹಿಸಿಕೊಳ್ಳಲಿದ್ದಾರೆ. ರಾಹುಲ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ನಾನೇ ಅಂಕಣಕ್ಕಿಳಿಯುತ್ತಿದ್ದೇನೆ ಎಂದಿದ್ದಾರೆ ಅವರು.
ಪೂಜಾರ ಪಡೆಗೆ ಕೊಹ್ಲಿ ಸ್ಫೂರ್ತಿ
ಮುಂಬರಲಿರುವ ಶ್ರೀಲಂಕಾ ಪ್ರವಾಸ ಕೊಹ್ಲಿ ಪಾಲಿಗೆ ಸವಾಲಿನ ಸರಣಿ. ಇದೇ ಮೊದಲ ಬಾರಿಗೆ ಅವರು, ಆ. 12ರಿಂದ ಆರಂಭಗೊಳ್ಳಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದಾರೆ. ಚೆನ್ನೈನಲ್ಲಿನ ಹವಾಗುಣ ಬಹುತೇಕ ಶ್ರೀಲಂಕಾದ ಹವಾಗುಣವನ್ನು ಹೋಲುತ್ತದಾದ್ದರಿಂದ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲು ಕೊಹ್ಲಿ ಮನಸ್ಸು ಮಾಡಿದ್ದಾರೆ. ಅದೇನೇ ಇರಲಿ, ಕೊಹ್ಲಿ ಆಗಮನ ಪೂಜಾರ ಪಡೆಗೆ ಹೊಸ ಶಕ್ತಿ ತರುವುದಂತೂ ಸುಳ್ಳಲ್ಲ.
ಪಂದ್ಯ ಆರಂಭ: ಬೆಳಗ್ಗೆ 10 ಗಂಟೆ