ಜೋಹಾನ್ಸ್‍ಬರ್ಗ್: ವರ್ಣಭೇದ ನೀತಿಯಿಂದಾಗಿ ನಿಷೇಧಕ್ಕೆ ಗುರಿಯಾಗಿ ನಂತರ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದ ದ.ಆಫ್ರಿಕಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಆಲ್‍ರೌಂಡರ್ ಕ್ಲೈವ್ ರೈಸ್ ಬ್ರೈನ್ ಟ್ಯೂಮರ್ ನಿಂದ ಇಹಲೋಕ ತ್ಯಜಿಸಿದ್ದಾರೆ.
66 ವರ್ಷದ ರೈಸ್ ಮಂಗಳವಾರ ಕೇಪ್ ಟೌನ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ಪಿಟಿಐ ವರದಿ ಮಾಡಿದೆ. ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ಮೇಲೆ ನಿಷೇಧ ಹೇರಿದ್ದ ಪರಿಣಾಮ ರೈಸ್ ತಮ್ಮ ವೃತ್ತಿ ಜೀವನದಲ್ಲಿ ಕೇವಲ 3 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದರು. ನಿಷೇಧ ತೆರವಾದ ನಂತರ ರೈಸ್ ತಮ್ಮ 42ನೇ ವಯಸ್ಸಿನಲ್ಲಿ ತಂಡದ ನಾಯಕತ್ವ ಹೊತ್ತು 1991-92ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು.
ಇಂಗ್ಲೆಂಡ್ ಕೌಂಟಿ ಕ್ರಿಕೆಟ್‍ನಲ್ಲೂ ರೈಸ್ ಸಾಕಷ್ಟು ಖ್ಯಾತಿ ಗಳಿಸಿದ್ದರು. 482 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ರೈಸ್, 26,331 ರನ್ ಕಲೆಹಾಕಿದ್ದರಲ್ಲದೆ, 930 ವಿಕೆಟ್‍ಗಳನ್ನು ತನ್ನದಾಗಿಸಿಕೊಂಡಿದ್ದರು.
ಬೆಂಗಳೂರಿಗೆ ಬಂದಿದ್ದರು: ಮೆದಳಿನಲ್ಲಿ ಉಂಟಾಗಿದ್ದ 4 ಸೆ.ಮೀ. ಉದ್ದದ ಗೆಡ್ಡೆಯಿಂದಾಗಿ ತೀವ್ರ ನೋವು ಅನುಭವಿಸುತ್ತಿದ್ದ ರೈಸ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೂ ಆಗಮಿಸಿದ್ದರು.