ಚೆನ್ನೈ: ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ದಿವ್ಯ ವೈಫಲ್ಯದ ಜತೆಗೆ ಪ್ರವಾಸಿ ಆಸ್ಟ್ರೇಲಿಯಾ 'ಎ' ತಂಡದ ಅತ್ಯಂತ ಪರಿಣಾಮಕಾರಿ ದಾಳಿಗೆ ನಲುಗಿದ ಆತಿಥೇಯ ಭಾರತ 'ಎ' ತಂಡ ಬುಧವಾರ ಆರಂಭವಾದ ಎರಡನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕನಿಷ್ಟ ಮೊತ್ತಕ್ಕೆ ಆಲೌಟ್ ಆಗಿದೆ.
ಪ್ರವಾಸಿ ತಂಡದ ದಿಟ್ಟ ಬೌಲಿಂಗ್‍ಗೆ ಬೆಚ್ಚಿದ ಚೇತೇಶ್ವರ ಪೂಜಾರ ಪಡೆ ತನ್ನ ಮೊದಲ ಇನ್ನಿಂಗ್ಸ್ ಅನ್ನು ಕೇವಲ 135 ರನ್‍ಗಳಿಗೆ ಕೊನೆಗೊಳಿಸಿತು. ಇದಕ್ಕೆ ಉತ್ತರವಾಗಿ ಪ್ರವಾಸಿ ತಂಡ ವಿಕೆಟ್ ನಷ್ಟವಿಲ್ಲದೆ 13 ಓವರ್‍ಗಳಲ್ಲಿ 43 ರನ್ ಗಳಿಸಿದೆ. ಆರಂಭಿಕರಾದ ಕೆಮರೂನ್ ಹಾಗೂ ನಾಯಕ ಉಸ್ಮಾನ್ ಖವಾಜಾ ಕ್ರಮವಾಗಿ 24 ಮತ್ತು 13 ರನ್ ಮಾಡಿ ಕ್ರೀಸ್‍ನಲ್ಲಿದ್ದರು. ಚೇಪಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ಪ್ರವಾಸಿ ತಂಡದ ಎದುರು ಪ್ರಾಬಲ್ಯ ಮೆರೆಯುವ ಛಲ ಹೊತ್ತಿದ್ದ ಆತಿಥೇಯರು ಈ ಪರಿಯಲ್ಲಿ ಹಿನ್ನಡೆ ಅನುಭವಿಸಿರುವುದು ಸ್ವತಃ ಕೋಚ್ ರಾಹುಲ್ ದ್ರಾವಿಡ್ ಅವರನ್ನೇ ದಂಗುಬಡಿಸಿದೆ. ಕನ್ನಡಿಗ ಕೆ.ಎಲ್. ರಾಹುಲ್‍ಗೆ ವಿಶ್ರಾಂತಿ ಕಲ್ಪಿಸಿದ್ದು ಮಹಾನ್ ಪ್ರಮಾದವೆಂಬುದನ್ನು ಪ್ರವಾಸಿ
ತಂಡ ಅರುಹಿತು.
ಆತಿಥೇಯರ ವಿರುದ್ಧ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಪ್ರವಾಸಿ ತಂಡದ ಪರ ಭಾರತ ಮೂಲದ ವೇಗಿ ಗುರೀಂದರ್ ಸಿಂಗ್ (3/25) ಮೂರು ವಿಕೆಟ್ ಪಡೆದರು. ಅವರೊಂದಿಗೆ ಎಡಗೈ ಸ್ಪಿನ್ನರ್ ದ್ವಯರಾದ ಸ್ಟೀವ್ ಒಕೇಫಿ (2/30) ಹಾಗೂ ಆಶ್ಟನ್ ಅಗರ್ (2/23), ಆಂಡ್ರ್ಯೂ ಫೆಕೇಟಿ (33/2) ತಲಾ ಎರಡೆರಡು ಮತ್ತು ವೇಗಿ ಮಾರ್ಕುಸ್ ಸ್ಟೋನಿಸ್ (1/21) ಒಂದು ವಿಕೆಟ್ ಎಗರಿಸಿ ಭಾರತದ ಮೇಲಿನ ಕ್ರಮಾಂಕವನ್ನು ಛಿದ್ರಗೊಳಿಸಿದರು.
ಬೆಳಿಗ್ಗೆ ಟಾಸ್ ಗೆದ್ದ ಚೇತೇಶ್ವರ ಪೂಜಾರ ಬ್ಯಾಟಿಂಗ್ ಆಯ್ದುಕೊಂಡರು. ಪೂರ್ವ ನಿಯೋಜನೆಯಂತೆ ಅಭಿನವ್ ಮುಕುಂದ್ (15) ಜತೆಗೆ ಇನ್ನಿಂಗ್ಸ್ ಕಟ್ಟಲು ಮುಂದಾದ ಅವರು 36 ಎಸೆತಗಳಲ್ಲಿ ಕಲೆಹಾಕಿದ್ದು 11 ರನ್‍ಗಳನ್ನು. ಇನ್ನು ಶ್ರೀಲಂಕಾ ಪ್ರವಾಸದ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಆಡಲು ಒಲವು ತೋರಿದ್ದ ಕೊಹ್ಲಿ ಒಂದು ತಾಸು ಕ್ರೀಸ್‍ನಲ್ಲಿದ್ದರೂ, 42 ಎಸೆತಗಳಲ್ಲಿ ಗಳಿಸಿದ್ದು ಕೇವಲ 16 ರನ್‍ಗಳನ್ನಷ್ಟೆ. ಇದು ಆತಿಥೇಯರನ್ನು ಚಡಪಡಿಸುವಂತೆ ಮಾಡಿತು. ಒಂದು ತಿಂಗಳ ನಂತರ ಮೈದಾನಕ್ಕಿಳಿದಿದ್ದ ಕೊಹ್ಲಿ ಪಿಚ್‍ನ ಗತಿಯನ್ನು ಗ್ರಹಿಸುವಲ್ಲಿ ವಿಫಲರಾದರು. ಅದರ ಫಲವಾಗಿ ಆಶ್ಟನ್ ಆಗರ್ ಅವರನ್ನು ಸುಲಭವಾಗಿ ಎಲ್‍ಬಿ ಬಲೆಗೆ ಕೆಡವಿದರು.
ನೆರವಿಗೆ ಬಂದ ನಾಯರ್
ಆಸೀಸ್ ಗಂಭೀರ ದಾಳಿಗೆ ತರಗೆಲೆಯಾದ ಭಾರತದ ಇನ್ನಿಂಗ್ಸ್‌ಗೆ ಒಂದಷ್ಟು ಜೀವಸೆಲೆಯಾದದ್ದು ಕರ್ನಾಟಕದ ಕರುಣ್ ನಾಯರ್. ಒಂದೆಡೆ ವಿಕೆಟ್‍ಗಳು ಉದುರುತ್ತಿದ್ದರೂ, ಸ್ಥಿತ ಪ್ರಜ್ಞತೆಯಿಂದ ಬ್ಯಾಟ್ ಮಾಡಿದ ನಾಯರ್ ಸಹನೆಯ ಆಟವಾಡಿದರು. 153 ಎಸೆತಗಳಲ್ಲಿ 5 ಬೌಂಡರಿಗಳುಳ್ಳ 50 ರನ್ ಮಾಡಿದ ಕರುಣ್ ನಾಯರ್ ಆತಿಥೇಯ ತಂಡ ನಿಕೃಷ್ಟ ಮೊತ್ತಕ್ಕೆ ಕುಸಿಯುವುದನ್ನು ಪಾರು ಮಾಡಿದರು. ಇನ್ನು ಆತಿಥೇಯ ಇನ್ನಿಂಗ್ಸ್ ನಲ್ಲಿ ಎರಡಂಕಿ ದಾಟಿದವರ ಪೈಕಿ ನಮಾನ್ ಓಜಾ (10) ಹಾಗೂ ಬಾಬಾ ಅಪರಾಜಿತ್ (12) ಮಾತ್ರವೇ.