ಕೋಪನ್‍ಹೇಗನ್: ವಿಶ್ವ ಆರ್ಚರಿ ಚಾಂಪಿಯನ್‍ಶಿಪ್ ನಲ್ಲಿ ಬುಧವಾರ ಭಾರತದ ಬಿಲ್ಲುಗಾರರು ಮಿಶ್ರಫಲ ಅನುಭವಿಸಿದ್ದಾರೆ.
ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಲಕ್ಷ್ಮಿ ರಾಣಿ ಮಾಝಿ ಹಾಗೂ ದೀಪಿಕಾ ಕುಮಾರಿ ಅಂತಿಮ ಹದಿನಾರರ ಘಟ್ಟಕ್ಕೆ ಪ್ರವೇಶ ಪಡೆದಿದ್ದರೆ, ರಿಮಿಲ್ ಬುರಿಯಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರಾಸೆ ಅನುಭವಿಸಿದರು.
ವಿಶ್ವದ ಮಾಜಿ ನಂ.1 ಆಟಗಾರ್ತಿ ದೀಪಿಕಾ ಮೊದಲ ಸುತ್ತಿನಲ್ಲಿ ಬೈ ಪಡೆದು ನಿರಾಯಾಸವಾಗಿ ಮುಂದಿನ ಸುತ್ತಿಗೆ ನಡೆದರು. ಗುರುವಾರ ನಡೆಯಲಿರುವ ಹದಿನಾರರ ಘಟ್ಟದ ಪಂದ್ಯದಲ್ಲಿ ಅವರು ಚೀನಾದ ಯುಹೊಂಗ್ ಕಿ ವಿರುದ್ಧ ಸೆಣಸಲಿದ್ದಾರೆ. ಇನ್ನು ಲಕ್ಷ್ಮಿ ರಾಣಿ ಅಂತಿಮ 48 ಹಾಗೂ 24ರ ಸೆಣಸಾಟದಲ್ಲಿ ಕ್ರಮವಾಗಿ ಥಾಮಸ್ ಸೊಲೆನ್ನಿ ಮತ್ತು ಇಟಲಿಯ ನತಾಲಿಯಾ ವಲೀವಾ ವಿರುದ್ಧ ತೀವ್ರ ಪೈಪೋಟಿ ಎದುರಿಸಿ ಗೆಲುವು ಪಡೆದರು. ಸೊಲೆನ್ನಿ ವಿರುದ್ಧ 6-5ರಿಂದ ಜಯ ಪಡೆದರೆ, ನತಾಲಿಯಾ ವಿರುದ್ಧ 9-7ರಿಂದ ಗೆಲುವು ಪಡೆದರು. ಇದೀಗ ಗುರುವಾರ ನಡೆಯಲಿರುವ ಪ್ರೀ-ಕ್ವಾರ್ಟರ್ ಫೈನಲ್ಸ್‍ನಲ್ಲಿ ಚೀನಾದ ಜಿಯಾಕ್ಸಿನ್ ವು ಎದುರು ಸೆಣಸಲಿದ್ದಾರೆ.