ಜೊಹಾನ್ಸ್ ಬರ್ಗ್ : ಜಗತ್ತಿನ ಇಬ್ಬರು ಮಹಾನ್ ನಾಯಕರಾದ ಮಹಾತ್ಮಾ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿ ಕ್ರಿಕೆಟ್ ಸರಣಿ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್ಎ) ಚಿಂತನೆ ನಡೆಸಿವೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ-ಮಂಡೇಲಾ ಹೆಸರಿನಲ್ಲಿ ಕ್ರಿಕೆಟ್ ಸರಣಿ ನಡೆಸಲು ಯೋಚಿಸುತ್ತಿರುವುದಾಗಿ ಸಿಎಸ್ಎ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲಾಗರ್ತ್ ಬುಧವಾರ ಇಲ್ಲಿ ಹೇಳಿದ್ದಾರೆ.
ಮುಂದಿನ ತಿಂಗಳು ಎಲ್ಲ ಮೂರೂ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಧರಿಸುವ ಹೊಸ ಕಿಟ್ ಬಿಡುಗಡೆಗೊಳಿಸಿದ ನಂತರ ಈ ವಿಷಯ ತಿಳಿಸಿದ ಲಾರ್ಗತ್, ಈ ಚಿಂತನೆಗೆ ಭಾರತದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇಬ್ಬರು ಮಹಾನ್ ನಾಯಕರ ಹೆಸರಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸರಣಿ ನಡೆಸುವ ಈ ಯೋಚನೆ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಉತ್ತಮ ಕ್ರಿಕೆಟ್ ಬಾಂಧವ್ಯ ಬೆಸೆದಿದ್ದು, ಐಪಿಎಲ್ ಸೇರಿದಂತೆ ಇತರೆ ವೃತ್ತಿಪರ ಲೀಗ್ ಗಳಲ್ಲಿ ಒಳ್ಳೆಯ ಸಂಬಂಧ ಮೂಡಿದೆ ಎಂದಿದ್ದಾರೆ.