ಕೋಲ್ಕತಾ: ಸೋತ ಪಂದ್ಯಗಳಿಂದ ಏನು ಕಲಿತೆವು ಎಂಬ ಲೆಕ್ಕಾಚಾರದಲ್ಲಿ ಮುಳುಗುವ ಕಾಲ ಮುಗಿಯಿತು. ಇನ್ನೇನಿದ್ದರೂ ಟೆಸ್ಟ್ ಪಂದ್ಯಗಳಲ್ಲಿ ಗೆಲವು ಪಡೆಯುವುದೊಂದೇ ನಮ್ಮ ಗುರಿ - ಇದು ಟೀಂ ಇಂಡಿಯಾ ಟೆಸ್ಟ್ ತಂಡದ ನೂತನ ನಾಯಕ ವಿರಾಟ್ ಕೊಹ್ಲಿ ಅವರ ಖಡಕ್ ಮಾತು.
ಜೂ. 10ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ಸರಣಿಗೂ ಮುನ್ನ, ಕೋಲ್ಕತಾದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಸ್ಟ್ ಕ್ರಿಕೆಟ್‍ನಲ್ಲೂ ಭಾರತ ಯಶಸ್ಸಿನ ಕುದುರೆಯೇರುವಂತೆ ಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು ಎಂದು ಎನ್‍ಡಿಟಿವಿ ವರದಿ ಮಾಡಿದೆ.
'ಈವರೆಗಿನ ಪಂದ್ಯಗಳಿಂದ ನಾವು ಸಾಕಷ್ಟು ಕಲಿತಿದ್ದೇವೆ. ಕಲಿಕೆ ನಿರಂತರ. ಹಾಗೆಂದ ಮಾತ್ರಕ್ಕೆ ಕಲಿಯುವುದು ಹಾಗೂ ಕಲಿಯುತ್ತಲೇ ಇರುವುದು ನಮ್ಮ ಏಕಮೇವ ಧ್ಯೇಯವಾಗಿರಬೇಕೆಂಬುದನ್ನು ನಾನು ಒಪ್ಪುವುದಿಲ್ಲ. ಟಿವಿಯಲ್ಲಿ ಪಂದ್ಯಗಳನ್ನು ನೋಡುವುದರಿಂದಲೂ ನಾವು ಕಲಿಯಬಹುದು. ಇದೆಲ್ಲವನ್ನು ಮೀರಿ ಟೆಸ್ಟ್ ಕ್ರಿಕೆಟ್‍ನಲ್ಲಿ ಗೆಲವು ಪಡೆಯುವ ಬಗ್ಗೆ ನಾವು ಪ್ರಯತ್ನಿಸಬೇಕು ಎಂದು ಕೊಹ್ಲಿ ಹೇಳಿದರು.