ಕ್ರೀಡೆ

ಭಾರತಕ್ಕೆ ಚಿನ್ನ ತಂದ ಟಿಂಟು

Mainashree

ವುಹಾನ್: ಭಾರತದ ಭರವಸೆಯ ಓಟಗಾರ್ತಿ ಟಿಂಟು ಲುಕಾ 21ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಈ ಮೂಲಕ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದಂತಾಗಿದೆ. ಭಾನುವಾರ ಕ್ರೀಡಾಕೂಟದ ಅಂತಿಮ ದಿನ ಮಹಿಳೆಯರ 800 ಮೀ. ಓಟದಲ್ಲಿ ಟಿಂಟುಲುಕಾ ಅಗ್ರಸ್ಥಾನ ಪಡೆದರು. ರಾಷ್ಟ್ರೀಯ ದಾಖಲೆ ಹೊಂದಿರುವ ಟಿಂಟು ಲುಕಾ, ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಟಿಂಟು 2:01.53 ನಿಮಿಷದಲ್ಲಿ ಓಟ ಮುಕ್ತಾಯಗೊಳಿಸಿ ಅಗ್ರಸ್ಥಾನ ಪಡೆದರು.

ಈ ಸ್ವರ್ಣ ಪದಕದ ಮೂಲಕ ಟಿಂಟು ಲುಕಾ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಮೊದಲ ವೈಯಕ್ತಿಕ ಚಿನ್ನ ಸಂಪಾದಿಸಿದ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಚೀನಾದ ಜಾವ್ ಝಿಂಗ್ (2:03.40 ನಿ.) ಬೆಳ್ಳಿ ಪದಕ ಪಡೆದರೆ, ಶ್ರೀಲಂಕಾದ ನಿಮಾಲಿ ಕ್ಲಾರಚ್ಚಿಗೆ (2:03.94 ನಿ.) ಕಂಚಿಗೆ ತೃಪ್ತಿಪಟ್ಟರು.

ಖ್ಯಾತ ಮಾಜಿ ಅಥ್ಲೀಟ್ ಪಿ.ಟಿ ಉಷಾ ಗರಡಿಯಲ್ಲಿ ಪಳಗಿರುವ ಟಿಂಟು, 2013ರ ಏಷ್ಯನ್ ಚಾಂಪಿಯನ್‍ಶಿಪ್ ಮತ್ತು 2014ರ ಏಷ್ಯನ್ ಗೇಮ್ಸ್ ನಲ್ಲಿ 4x400 ಮೀ. ರಿಲೇಯಲ್ಲಿ ಚಿನ್ನ ಗಳಿಸಿದ ತಂಡದ ಭಾಗವಾಗಿದ್ದರು. ಈ ಚಿನ್ನದ ಪದಕದೊಂದಿಗೆ ಟಿಂಟು ಲುಕಾ ಮುಂಬರುವ ಆಗಸ್ಟ್‍ನಲ್ಲಿ ಬೀಜಿಂಗ್‍ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಟಿಂಟು ಲುಕಾ 2:01.00 ನಿಮಿಷದಲ್ಲಿ ಓಟ ಮುಕ್ತಾಯಗೊಳಿಸಿದರೆ, ರಿಲೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿದ್ದಾರೆ. ಜಾನ್ಸನ್‍ಗೆ ಬೆಳ್ಳಿ: ಪುರುಷರ 800 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ ಬೆಳ್ಳಿ ಪದಕ ಪಡೆದಿದ್ದಾರೆ. ಕತಾರ್‍ನ ಹಾಲಿ ಚಾಂಪಿಯನ್ ಮುಸಾಬ ಬಾಲಾ (1:49.40 ನಿ.) ಅವರ ನಂತರದ ಸ್ಥಾನ ಪಡೆದ ಜಾನ್ಸನ್ (1:49.69 ನಿ.) ಎರಡನೇ ಸ್ಥಾನ ಪಡೆದರು.

ಜಪಾನ್‍ನ ಕವಮೊಟೊ ಶೊ (1:50.50 ನಿ.) ಕಂಚಿನ ಪದಕ ಪಡೆದರು. ಪುರುಷರ ಮತ್ತು ಮಹಿಳೆಯರ 200 ಮೀ. ಓಟದಲ್ಲಿ ಭಾರತದ ಧರಮ್ ಬಿರ್ ಸಿಂಗ್ (20.66 ಸೆ.) ಮತ್ತು ಸ್ರಬಾನಿ ನಂದಾ (23.54 ಸೆ.) ತಮ್ಮ ರೇಸ್‍ನಲ್ಲಿ ಮೂರನೇ ಸ್ಥಾನ ಪಡೆದು ದೇಶಕ್ಕೆ ಎರಡು ಕಂಚಿನ ಪದಕ ತಂದುಕೊಟ್ಟರು.

ಮಹಿಳೆಯರ 4x400 ಮೀ. ರಿಲೇನಲ್ಲಿ ಭಾರತ ತಂಡ ತನ್ನ ಚಾಪಿಯನ್ ಪಟ್ಟ ಉಳಿಸಿಕೊಳ್ಳಲು ವಿಫಲವಾಯಿತು. ಪುರುಷರ 4x400 ಮೀ. ರಿಲೇಯಲ್ಲಿ ಭಾರತ ತಂಡ (3:05.14 ನಿ.) ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತವಾಯಿತು.

ಶನಿವಾರ ಚಿನ್ನ ಸಂಪಾದಿಸಿದ್ದ ಸ್ಟೀಪಲ್‍ಚೇಸ್‍ಪಟು ಲಲಿತಾ ಬಬರ್, 10000 ಮೀ. ರೇಸ್‍ನಲ್ಲಿ ಮತ್ತೊಂದು ಪದಕ ಪಡೆಯುವ ಗುರಿ ಹೊಂದಿದ್ದರಾದರೂ ಯಶಸ್ವಿಯಾಗಲಿಲ್ಲ. ಜಾವ್ಲಿನ್ ಥ್ರೋನಲ್ಲಿ ಅನು ರಾಣಿ ಐದನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು. ಅನು ತಮ್ಮ ವಿಭಾಗದಲ್ಲಿ 51.26 ಮೀ. ದೂರ ಎಸೆದು ನಿರಾಸೆ ಅನುಭವಿಸಿದರು.

SCROLL FOR NEXT