ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಸಾಕಷ್ಟು ನಿರಾಸೆಗೊಂಡಿದ್ದ ನನಗೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಾತುಗಳು ಹೊಸ ಸ್ಫೂರ್ತಿ ನೀಡಿದ್ದವು ಎಂದು ಭಾರತೀಯ ಫುಟ್ಬಾಲ್ ತಂಡದ ಆಟಗಾರ ಸಂದೇಶ್ ಜಿಂಗನ್ ತಿಳಿಸಿದ್ದಾರೆ.
ಜೂನ್ 11ರಂದು ಕಂಠೀರವ ಕ್ರೀಡಾಂಗಣದಲ್ಲಿ ಓಮನ್ ವಿರುದ್ಧ ನಡೆಯಲಿರುವ 2018ರ ವಿಶ್ವಕಪ್ ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರತ ತಂಡ ಅಭ್ಯಾಸ ನಡೆಸುತ್ತಿದೆ.
ಮಂಗಳವಾರ ಅಭ್ಯಾಸದ ವೇಳೆ ಮಾತನಾಡಿದ ಸಂದೇಶ್, ಐಎಸ್‍ಎಲ್ ಫೈನಲ್‍ನಲ್ಲಿ ಸೋತ ನಂತರ ಎಲ್ಲರು ನಿರಾಸೆಗೊಂಡಿದ್ದೆವು. ನನ್ನ ಹಿಂದಿನಿಂದ ಯಾರೋ ಹೆಗಲ ಮೇಲೆ ಕೈ ಇಟ್ಟರು.
ತಿರುಗಿ ನೋಡಿದಾಗ ಸಚಿನ್ ತೆಂಡೂಲ್ಕರ್. ಆಗ ಅವರು ಈ ಬೇಸರದಿಂದ ಹೊರಗೆ ಬಾ. ನಾನು ಆರನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದೆ ಎಂದರು. ಈ ಮಾತಿನಿಂದ ನಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿತು. ಅಲ್ಲದೆ ಎಂದಿಗೂ ಕನಸು ಕಾಣುವುದನ್ನು ನಿಲ್ಲಿಸಬಾರದು ಎಂಬುದನ್ನು ಕಲಿಸಿತು ಎಂದು ತಿಳಿಸಿದರು.
ಸ್ಟೀಫನ್ ಉತ್ತಮ ಪ್ರೋತ್ಸಾಹಕ: ತಂಡದ ಕೋಚ್ ಸ್ಪೀಫನ್ ಕಾನ್ಸ್ ಟಾಂಟೀನ್ ಕುರಿತು ಮಾತನಾಡಿದ ಜಿಂಗನ್, ಅವರೊಬ್ಬ ಸ್ಫೂರ್ತಿದಾಯಕ ವ್ಯಕ್ತಿ. ಮೈದಾನದ ಒಳಗೆ ಮತ್ತು ಹೊರಗೆ ಪ್ರತಿ ಬಾರಿಯು ಶಿಸ್ತನ್ನು ನಿರೀಕ್ಷಿಸುತ್ತಾರೆ. ಅತ್ಯುತ್ತಮ ತಂತ್ರಜ್ಞಾನ ಜತೆಗೆ ಅವರೊಬ್ಬ ಉತ್ತಮ ಪ್ರೋತ್ಸಾಹಕ ಎಂದು ಅಭಿಪ್ರಾಯಪಟ್ಟರು.