ನವದೆಹಲಿ: ಮಾಜಿ ಕ್ರಿಕೆಟಿಗ, ಭಾರತ ತಂಡದ ನಿರ್ದೇಶಕ ರವಿ ಶಾಸ್ತ್ರಿ ಅವರು ಟೀಂ ಇಂಡಿಯಾದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶಾಸ್ತ್ರಿ ಅವರು ಭಾರತೀಯ ಕ್ರಿಕೆಟ್ ತಂಡದ ಮುಂದಿನ ಕೋಚ್ ಆಗಿ ರವಿ ಶಾಸ್ತ್ರಿ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅವರಿಗೆ ವಾರ್ಷಿಕ ಏಳು ಕೋಟಿ ರುಪಾಯಿ ಸಂಭಾವನೆ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಶಾಸ್ತ್ರಿ ಅವರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕೋಚ್ ಎಂಬ ಖ್ಯಾತಿ ಗಳಿಸಲಿದ್ದಾರೆ.
53 ವರ್ಷದ ರವಿ ಶಾಸ್ತ್ರಿ ಅವರು ಟಿವಿ ವೀಕ್ಷಕ ವಿವರಣೆಕಾರರಾಗಿ ಬಿಸಿಸಿಐನಿಂದ ವರ್ಷಕ್ಕೆ ನಾಲ್ಕು ಕೋಟಿ ಸಂಭಾವನೆ ಪಡೆದಿದ್ದಾರೆ. ಅಲ್ಲದೆ ತಂಡದ ನಿರ್ದೇಶಕರಾಗಿ ಈಗ ವರ್ಷಕ್ಕೆ 6 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
2015ರ ವಿಶ್ವಕಪ್ ನಂತರ ಟೀಂ ಇಂಡಿಯಾ ಕೋಚ್ ಡಂಕನ್ ಫ್ಲೆಚರ್ ಅವರ ಅವಧಿ ಮುಕ್ತಾಯಗೊಂಡಿದ್ದು, ಅವರು ಬಿಸಿಸಿಐನಿಂದ 4.5 ಕೋಟಿ ಸಂಭಾವನೆ ಪಡೆಯುತ್ತಿದ್ದರು.
ಬಾಂಗ್ಲಾದೇಶ ಪ್ರವಾಸದ ಅಂತ್ಯದ ವೇಳೆಗೆ ಬಿಸಿಸಿಐ ತಂಡದ ನೂತನ ಕೋಚ್ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಒಂದು ವೇಳೆ ಶಾಸ್ತ್ರಿ ಅವರೇ ನೂತನ ಕೋಚ್ ಆಗಿ ನೇಮಕ ಗೊಂಡಿದ್ದೆಯಾದರೇ, ರವಿ ಶಾಸ್ತ್ರಿ ಅವರು 2000ದ ನಂತರ ಟೀಂ ಇಂಡಿಯಾದ ಕೋಚ್ ಆದ ಮೊದಲ ಭಾರತೀಯ ಅನಿಸಿಕೊಳ್ಳಲಿದ್ದಾರೆ.
ಕಳೆದ 15 ವರ್ಷಗಳಿಂದ ಟೀಂ ಇಂಡಿಯಾದ ಕೋಚ್‌ಗಳಾಗಿ ವಿದೇಶಿಗಳನ್ನೇ ನೇಮಕ ಮಾಡಲಾಗುತ್ತಿದೆ. ಜಾನ್ ರೈಟ್, ಗ್ರೆಗ್ ಚಾಪೆಲ್, ಗ್ಯಾರಿ ಕ್ರಿಸ್ಟನ್ ಮತ್ತು ಡಂಕನ್ ಫ್ಲೆಚರ್ ಮೊದಲಾದವರು ಈ ಸ್ಥಾನಗಳನ್ನು ವಹಿಸಿದ್ದರು. ಈಗ ಭಾರತೀಯನೊಬ್ಬನಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.