ನವದೆಹಲಿ: ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಸಹೋದರ ಹಾಗೂ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಎನ್. ರಾಮಚಂದ್ರನ್ ಅವರ ವಿರುದ್ಧ ಸಂಸ್ಥೆಯೊಳಗೆ ಎದ್ದಿದ್ದ ಬಂಡಾಯ ಈಗ ನಿರ್ಣಾಯಕ ಸನ್ನಿವೇಶಕ್ಕೆ ಬಂದು ನಿಂತಿದೆ. ಸಂಸ್ಥೆಯ ಸುಮಾರು ಶೇ. 50 ರಷ್ಟು ಸದಸ್ಯರು ರಾಮಚಂದ್ರನ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದು, ಶೀಘ್ರವೇ ಮಹಾಧಿವೇಶನ ನಡೆಸುವಂತೆ ಆಗ್ರಹಿಸಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.
ದೇಶದ ನಾನಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಗಳು ಹಾಗೂ ರಾಜ್ಯಗಳ ಒಲಿಂಪಿಕ್ಸ್ ಸಂಸ್ಥೆಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿಗೆ ಭಾರತೀಯ ಫುಟ್ಬಾಲ್ ಸಂಸ್ಥೆಯೂ ತನ್ನ ಸಹಮತ ವ್ಯಕ್ತ ಪಡಿಸಿದೆ. ಇದರಿಂದಾಗಿ, ರಾಮಚಂದ್ರನ್ ಅವರ ವಿರುದ್ಧದ ಬಂಡಾಯ ಮತ್ತಷ್ಟು ಹೆಚ್ಚಾಗಿದೆ.
ಸಂವಿಧಾನ ಏನನ್ನುತ್ತೆ?: ಐಒಸಿಯ ಸಂವಿಧಾನದ ಪ್ರಕಾರ ಸಂಸ್ಥೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸದಸ್ಯರ ಸಂಖ್ಯೆ ಕನಿಷ್ಠ ಶೇ.50 ಇರಬೇಕು. ಅಲ್ಲದೇ ಸದಸ್ಯರು ಮಂಡಿಸಿದ ಒಂದು ತಿಂಗಳ ಅವಧಿಯೊಳಗೆ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಚರ್ಚಿಸಿ ಸಂಸ್ಥೆಯ ಮಹಾಧಿವೇಶನ ಕರೆಯಬೇಕು. ಅಲ್ಲಿ ಗೊತ್ತುವಳಿಯನ್ನು ನಿರ್ಲಕ್ಷಿಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಮಹಾಧಿವೇಶನ ಕರೆಯದಿದ್ದ ಪಕ್ಷದಲ್ಲಿ ಸದಸ್ಯರೇ ಖುದ್ದಾಗಿ, ಮಹಾಧಿವೇಶನಕ್ಕೆ ನಾಲ್ಕನೇ ಮೂರರಷ್ಟು ಸದಸ್ಯರು ಹಾಜರಾಗಿರಲೇಬೆಕು. ಅವಿಶ್ವಾಸ ನಿರ್ಣಯವನ್ನು ಮಂಡಿಸಿ, ಅಧ್ಯಕ್ಷರನ್ನು ಪದಚ್ಯುತಗೊಳಿಸಲು ಸದಸ್ಯರಿಗೆ ಅವಕಾಶವಿರುತ್ತದೆ. ರಾಮಚಂದ್ರನ್ ವಿರುದ್ದ ಎದ್ದಿರುವ ಬಂಡಾಯ ಈಗಾಗಲೇ ಶೇ.50 ರಷ್ಟು ಮುಟ್ಟಿದ್ದು ಸಂಚಕಾರ ತಂದೊಡ್ಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.