ಕ್ರೀಡೆ

ಟ್ರಾಕ್‍ನಲ್ಲಿ ಚಾಂಪಿಯನ್ ನೆರೆಯವರಿಗೆ ಏಲಿಯನ್!

Srinivasamurthy VN

ಕಿಂಗ್ಸ್‍ಸ್ಟನ್: ಟ್ರ್ಯಾಕ್ ಮೇಲೆ ಈತನಷ್ಟು ವೇಗವಾಗಿ ಓಡುವ ವ್ಯಕ್ತಿ ವಿಶ್ವದಲ್ಲಿ ಸದ್ಯಕ್ಕಂತೂ ಇಲ್ಲ. ಹಾಗಾಗಿಯೇ ಈತ ವಿಶ್ವ ಅತಿ ವೇಗದ ಓಟಗಾರ ಎಂಬ ಹೆಗ್ಗಳಿಕೆ ಈತನ ಹೆಗಲೇರಿದೆ.

ದಾಖಲೆಗಳ ಸರದಾರನಾದ ಉಸೇನ್ ಬೋಲ್ಟ್ ಎಂದರೆ, ಇಡೀ ವಿಶ್ವವೇ ಮೆಚ್ಚುವ ಅಥ್ಲೀಟ್. ಆದರೆ, ಈ ಖ್ಯಾತಿ ಈಗ ಅಪಕೀರ್ತಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಬೋಲ್ಟ್ ಅವರನ್ನು ಆತನ ನೆರೆಯವರು `ನರಕದಿಂದ ಬಂದ ವ್ಯಕ್ತಿ' ಎಂದು ಬೈಯ್ಯುತ್ತಿದ್ದಾರೆ. ಟ್ರಾಕ್ ಮೇಲೆ ಮಿಂಚಿನ ಓಟದ ಸರದಾರನಿಗೆ ಆತನ ನೆರೆಹೊರೆಯವರು ನಿತ್ಯವೂ ಹಿಡಿಶಾಪ ಹಾಕುತ್ತಾರೆ.  ದುರಹಂಕಾರದಿಂದ ವರ್ತಿಸುತ್ತಾ ಸದಾ ನೆರೆಹೊರೆಯವರಿಗೆ ಕಿರಿಕಿರಿ ಕೊಡುವ ಈತನ ಬಗ್ಗೆ ಹಲವಾರು ದೂರುಗಳೂ ದಾಖಲಾಗಿವೆ ಎಂದು ಡೈಲಿಮೇಲ್ ವರದಿಯನ್ನು ಎನ್‍ಡಿಟಿವಿ ಪ್ರಕಟಿಸಿದೆ.

ಈತ ಯಾವುದಾದರೂ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಭಾಗವಹಿಸುತ್ತಾನೆಂದರೆ, ಅದು ಬೋಲ್ಟ್ ಅವರ ನೆರೆಹೊರೆಯವರಿಗೆ ಹಬ್ಬದ ಸಡಗರ ತರುತ್ತದೆ. ಏಕೆಂದರೆ, ಆತನ ಮನೆಯಲ್ಲಿ ಆತನಿಲ್ಲದಷ್ಟು ದಿನ ಅವರು ಹಾಯಾಗಿರಬಹುದು. ಹೌದು. ಬೋಲ್ಟ್ ಮನೆಯಲ್ಲಿದ್ದಾನೆಂದರೆ, ಅದು ಮನೆಯಾಗಿರುವುದಿಲ್ಲ. ಅದು ಕ್ಲಬ್ ಆಗಿರುತ್ತದೆ. ಹಗಲಾಗಲೀ, ರಾತ್ರಿಯಾಗಲೀ ಅಲ್ಲಿ ಮದ್ಯ, ಮದನಿಯರು ತಾಂಡವ ಆಡುತ್ತಿರುತ್ತಾರೆ. ದಿನಗಳು, ರಾತ್ರಿಗಳು ಕಳೆದರೂ ಆ ಮನೆಯಿಂದ ಕರ್ಕಶ ಸಂಗೀತ, ಅರೆಬೆತ್ತಲೆ ಹುಡುಗಿಯರೊಂದಿಗೆ ಬೋಲ್ಟ್ ಸ್ನೇಹಿತರ ಅಸಭ್ಯ ವರ್ತನೆಗಳು ಸುತ್ತಮುತ್ತಲ ಜನರಿಗೆ ರಾಚುತ್ತಿರುತ್ತವೆ. ಸಂಜೆ ಆರಂಭವಾಗುವ ಸಂಗೀತಗೋಷ್ಠಿಗಳು ರಾತ್ರಿ ಕಳೆದು ಬೆಳಗಾದರೂ ನಡೆಯುವುದರಿಂದ ನೆರೆಹೊರೆಯವರ ಶಾಂತ ಜೀವನಕ್ಕೆ ಭಂಗ ಬರುತ್ತಿದೆ ಎಂದು ಹಲವಾರು ಮಂದಿ ಆರೋಪಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ನೆರೆಹೊರೆಯವರೂ ದೂರು ನೀಡಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಎಷ್ಟೇ ಬಾರಿ ಮನವಿ ಮಾಡಿದರೂ, ಬೋಲ್ಟ್ ಇದನ್ನು ನಿರ್ಲಕ್ಷಿಸಿದ್ದಾರೆಂಬ ಆರೋಪಗಳು ಅವರ ಮೇಲಿದೆ.

SCROLL FOR NEXT