ಮುಂಬೈ: ಭಾರತೀಯ ಆಟಗಾರರ ಲಂಚಾರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಹಗರಣದ ಪ್ರಮುಖ ಆರೋಪಿ ಲಲಿತ್ ಮೋದಿ ಅವರು ಕ್ರಿಕೆಟ್ ಸಮಿತಿ ಸಿಇಓ ಡೇವ್ ರಿಚರ್ಡ್ ಸನ್ ಅವರಿಗೆ ಇಮೇಲ್ ಮಾಡಿರುವುದು ಸತ್ಯ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾನುವಾರ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಅಧಿಕೃತವಾಗಿ ಮಾಹಿತಿ ನೀಡಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಆಟಗಾರರ ಲಂಚಾರೋಪ ಪ್ರಕರಣ ಸಂಬಂಧಿಸಿದಂತೆ (ಎಸಿಎಸ್ ಯು) ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕವು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಡೇವ್ ರಿಚರ್ಡ್ ಸನ್ ಅವರಿಗೆ ಲಲಿತ್ ಮೋದಿ ಗೌಪ್ಯ ಮಾಹಿತಿ ನೀಡಿರುವುದು ಸತ್ಯ ಎಂಬುದು ತಿಳಿದುಬಂದಿದೆ ಎಂದು ಹೇಳಿದೆ..
ವೀಸಾ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಭಾರತದ ಇಬ್ಬರು ಹಾಗೂ ವೆಸ್ಟ್ ಇಂಡೀಸ್ ತಂಡದ ಓರ್ವ ಆಟಗಾರರು ರಿಯಲ್ ಎಸ್ಟೇಟ್ ಉದ್ಯಮಿಯಿಂದ ಲಂಚ ಪಡೆದಿದ್ದಾರೆ ಎಂದು ಹೇಳುವ ಮೂಲಕ ಕ್ರೀಡಾ ವಲಯದಲ್ಲೂ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದರು.
ಭಾರತ ತಂಡದ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ವೆಸ್ಟ್ ಇಂಡೀಸ್ ತಂಡದ ಆಟಗಾರ ಡ್ರೈನ್ ಬ್ರಾವೋ ವಿರುದ್ಧ ಲಲಿತ್ ಮೋದಿ ಅವರು ಆರೋಪ ವ್ಯಕ್ತಪಡಿಸಿದ್ದಲ್ಲದೇ, ಈ ಮೂವರು ಆಟಗಾರರು ರಿಯಲ್ ಎಸ್ಟೇಟ್ ಉದ್ಯಮಿಗೆ ಬಹಳ ಆಪ್ತರಾಗಿದ್ದು, ಲಂಚವನ್ನು ಫ್ಲಾಟ್ ಹಾಗೂ ಹಣದ ಮೂಲಕ ಪಡೆದಿದ್ದಾರೆ. ನನಗೆ ಬಂದಿದ್ದ ಮಾಹಿತಿಯ ಪ್ರಕಾರ ಓರ್ವ ಆಟಗಾರ 20 ಕೋಟಿ ಹಣ ಪಡೆದಿದ್ದರು ಎಂದು ತಿಳಿದುಬಂದಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಸಿಇಓ ಡೇವ್ ರಿಚರ್ಡಸನ್ ಅವರಿಗೆ 2013ರ ಜೂನ್ ತಿಂಗಳಿನಲ್ಲಿಯೇ ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದರು.