ನವದೆಹಲಿ: ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ ಮನಸ್ತಾಪವಿದೆ ಎಂಬ ಮಾಧ್ಯಮಗಳ ವರದಿಯನ್ನು ತಂಡದ ನಿರ್ದೇಶಕ ರವಿಶಾಸ್ತ್ರಿ ತಳ್ಳಿ ಹಾಕಿದ್ದಾರೆ. ``ಇದು ನಾನು ಕೇಳಿದ ಸುಳ್ಳಿನ ಕಂತೆ. ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಪರಸ್ಪರ ಗೌರವ ಹೊಂದಿದ್ದು, ಒಬ್ಬರಿಗೊಬ್ಬರು ನೆರವಾಗಿ ಆಡಲು ಇಚ್ಛಿಸುತ್ತಾರೆ. ಇವರಿಬ್ಬರ ನಡುವೆ ಮನಸ್ತಾಪವಿದೆ ಎಂಬ ವರದಿ ಸುಳ್ಳು. ಇವರಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದ್ದು, ಕಳೆದ ವರ್ಷದ ಅವಧಿಯಲ್ಲಿ ಭಾರತ ಆಡಿರುವ ಶೇ.70ರಷ್ಟು ಪಂದ್ಯಗಳಲ್ಲಿ ಗೆಲವು ದಾಖಲಿಸಿರುವುದೇ ಇದಕ್ಕೆ ಸಾಕ್ಷಿ'' ಎಂದಿದ್ದಾರೆ. ``ಕೊಹ್ಲಿ ಇನ್ನೂ ಯುವ ಆಟಗಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಿಯಲಿದ್ದಾನೆ. ಟೆಸ್ಟ್ ನಾಯಕತ್ವದಲ್ಲಿ ಮುಂದಿನ ಎರಡು ವರ್ಷ ಹೊಂದಿಕೊಳ್ಳಲು ಅವಕಾಶ ನೀಡಬೇಕು'' ಎಂದೂ ರವಿ ಶಾಸ್ತ್ರಿ ತಿಳಿಸಿದ್ದಾರೆ. ಧೋನಿ ಸಾರ್ವಕಾಲಿನ ಶ್ರೇಷ್ಠ ಆಟಗಾರ. ಅವರು ತಮ್ಮದೇ ಶೈಲಿಯ ಕ್ರಿಕೆಟ್‍ನಿಂದ ಮನ್ನಣೆ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‍ಗೆ ಅವರು ನಿವೃತ್ತಿ ನೀಡಿದ ನಿರ್ಧಾರ ಅವರ ಶೈಲಿಗೆ ಉತ್ತಮ ಉದಾಹರಣೆ. ಬೇರೆ ಸಾಕಷ್ಟು ಆಟಗಾರರು ವೃತ್ತಿ ಜೀವನದಲ್ಲಿ 100ರ ಗಡಿ ಮುಟ್ಟಲು ಬಯಸುತ್ತಿದ್ದರು ಎಂದರು.