ದುಬೈ: ಸ್ವಿಜರ್‍ಲೆಂಡ್‍ನ ರೋಜರ್ ಫೆಡರರ್ ಏಳನೇ ಬಾರಿಗೆ ದುಬೈ ಓಪನ್ ಟೆನಿಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಫೆಡರರ್, 6-3, 7-5 ನೇರ ಸೆಟ್‍ಗಳಿಂದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಪರಾಭವಗೊಳಿಸಿ ಈ ಸಾಧನೆ ಮಾಡಿದರು.
ಜೀವನದ 126ನೇ ಎಟಿಪಿ ಫೈನಲ್‍ನಲ್ಲಿ ಆಡಿದ್ದ ಸ್ವಿಸ್ ಆಟಗಾರ, ವಿಶ್ವದ ನಂಬರ್ ಒನ್ ಆಟಗಾರ ಜೊಕೊವಿಚ್‍ಗೆ ಕಠಿಣ ಸವಾಲು ಒಡ್ಡುವ ಮೂಲಕ ಮೈಕೊಡವಿ ಮೇಲೇಳಲು ಅವಕಾಶವನ್ನೇ ನೀಡಲಿಲ್ಲ.
ಇದರೊಂದಿಗೆ ಫೆಡರರ್ ಅವರು ಜೊಕೊವಿಚ್ ಜೊತೆಗಿನ ಮುಖಾಮುಖಿಯಲ್ಲಿ 20-17ರ ಅಂತರದಲ್ಲಿ ತಮ್ಮ ಮೇಲುಗೈ ಮುಂದುವರಿಸಿಕೊಂಡು ಹೋದರು. ಅಲ್ಲದೆ, ದುಬೈನಲ್ಲಿ ಈ ಇಬ್ಬರೂ ಪರಸ್ಪರ ನಾಲ್ಕನೇ ಬಾರಿಗೆ ಎದುರಾಗಿದ್ದರು. ಫೆಡರರ್ 3-1ರ ಮುನ್ನಡೆಯೊಂದಿಗೆ ತಮ್ಮ ಪ್ರಭುತ್ವ ಸ್ಥಾಪಿಸಿದ್ದಾರೆ.
ಈ ಮುನ್ನ ಫೆಡರರ್, 2003ರಲ್ಲಿ ಜಿರಿ ನೊವಾಕ್, 2004ರಲ್ಲಿ ಫೆಲಿಸಿಯಾನೊ ಲೊಪೆಜ್, 2005ರಲ್ಲಿ ಇವಾನ್ ಲ್ಯೂಬಿಸಿಸ್, 2007ರಲ್ಲಿ ಮೈಕೆಲ್ ಯೋಜಿನಿ, 2012ರಲ್ಲಿ ಆ್ಯಂಡಿ ಮರ್ರೆ ಹಾಗೂ 2014ರಲ್ಲಿ ತಾಮಸ್ ಬೆರ್ಡಿಚ್ ರನ್ನು ಸೋಲಿಸಿ ದುಬೈ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಬೋಪಣ್ಣ-ನೆಸ್ಟರ್‍ಗೆ ಡಬಲ್ಸ್ ಪ್ರಶಸ್ತಿ
ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡ್ಯಾನಿಯಲ್ ನೆಸ್ಟರ್ ಜೋಡಿ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಬೋಪಣ್ಣ ಮತ್ತು ನೆಸ್ಟರ್, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಐಸಾಮುಲ್ ಹಕ್ ಖುರೇಷಿ ಮತ್ತು ಸರ್ಬಿಯಾದ ನೆನಾದ್ ಜಿಮೊಂಜಿಚ್ ವಿರುದ್ಧ 6-4, 6-1 ಸೆಟ್‍ಗಳಿಂದ ಸೋಲಿಸಿ ಈ ಸಾಧನೆ ಮಾಡಿದರು.