ಸ್ವಚ್ಛ ಐಪಿಎಲ್ ನಮ್ಮ ಗುರಿ: ಮ್ಯಾಥ್ಯೂಸ್
ಕೊಚ್ಚಿ: ಫಿಕ್ಸಿಂಗ್ ಕಳಂಕದಿಂದ ಜರ್ಝರಿತವಾಗಿರುವ ಐಪಿಎಲ್ ನ ವೈಭವವನ್ನು ಪುನರುತ್ಥಾನಗೊಳಿಸುವುದಾಗಿ ನೂತನ ಬಿಸಿಸಿಐ ಉಪಾಧ್ಯಕ್ಷ ಹಾಗೂ ಐಪಿಎಲ್ ಆಡಳಿತ ಮಂಡಳಿ ಸದಸ್ಯ ಟಿ.ಸಿ. ಮ್ಯಾಥ್ಯೂಸ್ ಹೇಳಿದ್ದಾರೆ. ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಪಿಎಲ್‍ನ ವೈಭವ ಮರುಕಳಿಸುವಂತೆ ಮಾಡಲು ಸಕಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಘೋಷಿಸಿದರು.
ವ್ಯವಹಾರಗಳ ಬಗ್ಗೆ ಕಾಳಜಿ: ಇನ್ನು ಮುಂದೆ, ಐಪಿಎಲ್ ಪಂದ್ಯಾವಳಿಗಳಲ್ಲಿ ಪಾಲ್ಗೋಳ್ಳುವ ಎಲ್ಲಾ ತಂಡಗಳ ಫ್ರಾಂಚೈಸಿಗಳ ಹಣಕಾಸು ವ್ಯವಹಾರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದ ಮ್ಯಾಥ್ಯೂಸ್, ಐಪಿಎಲ್ ಪಂದ್ಯಾವಳಿಯನ್ನು ಭ್ರಷ್ಟಾಚಾರ, ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಮುಕ್ತಗೊಳಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಹೆಚ್ಚಿನ ಜವಾಬ್ದಾರಿ: ಬಿಸಿಸಿಐ ಉಪಾಧ್ಯಕ್ಷ ಹಾಗೂ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಮರುದಿನವೇ ಮ್ಯಾಥ್ಯೂಸ್ ಅವರು ಐಪಿಎಲ್ ಟೂರ್ನಿಯನ್ನು ಭ್ರಷ್ಟಾಚಾರ ಮುಕ್ತವಾಗಿಸಿರುವ ಬಗ್ಗೆ ಘಂಟಾಘೋಷವಾಗಿ ಆಶ್ವಾಸನೆ ನೀಡಿರುವುದು ಅನಿರೀಕ್ಷಿತ ನಡೆ. ಯಾವಾಗ ಐಪಿಎಲ್ ಫಿಕ್ಸಿಂಗ್ ಹಗರಣ ಹೊರಬಿದ್ದು ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. 2013ರ ಐಪಿಎಲ್ ಫಿಕ್ಸಿಂಗ್ ಬಗ್ಗೆ ಹೊರಬಿದ್ದ ವಿಚಾರಗಳು ಆಘಾತಕಾರಿಯಾಗಿದ್ದವು.
ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳ ಮುಖ್ಯಸ್ಥರೇ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‍ನಂಥ ದಂಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆರೋಪಗಳು ಹಾಗೂ ಅಂದಿನ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಪಟ್ಟಭದ್ರ ಹಿತಾಸಕ್ತಿ ಗುಣ ಎಲ್ಲರಲ್ಲೂ ಬೇಸರ ಮೂಡಿಸಿತ್ತು. ಇದೀಗ, ಆಣತಿಯಂತೆ ಪದಾಧಿಕಾರಿಗಳ ಹುದ್ದೆಗಳಿಗೆ ಚುನಾವಣೆ ನಡೆದು ಬಿಸಿಸಿಐನಲ್ಲಿ ಹೊಸ ತಂಡ ಆಡಳಿತ ವಹಿಸಿಕೊಂಡಿದೆ. ಹಾಗಾಗಿ ಹೊಸ ಆಡಳಿತ ಮಂಡಳಿಗೆ ಐಪಿಎಲ್ ಅನ್ನು ಕಳಂಕಮುಕ್ತವಾಗಿಸುವುದು ಅನಿವಾರ್ಯವಾಗಿದೆ. ಅತ್ತ, ನ್ಯಾಯಾಲಯ ಹಾಗೂ ಮಾಧ್ಯಮಗಳೂ ತದೇಕಚಿತ್ತತೆಯಿಂದ ನೋಡುತ್ತಿರುವುದರಿಂದ ಹೊಸ ಆಡಳಿತ ಮಂಡಳಿಯ ಮೇಲೆ ಈಗ ತೂಗುಗತ್ತಿ ತೂಗುತ್ತಿರುವುದಂತೂ ಸತ್ಯ.
`ಶ್ರೀ' ಬಗ್ಗೆ ಸಾಫ್ಟ್ ಕಾರ್ನರ್?
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿರುವ ಬೌಲರ್ ಶ್ರೀಶಾಂತ್ ಅವರು ಶೀಘ್ರವೇ ದೋಷಮುಕ್ತರಾಗಿ ಹೊರಬರುವ ಆಶಯವನ್ನು ಮ್ಯಾಥ್ಯೂಸ್ ವ್ಯಕ್ತಪಡಿಸಿದರು. ಶ್ರೀಶಾಂತ್ ಅವರ ಪ್ರಕರಣದ ವಿಚಾರಣೆ ದೆಹಲಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಶೀಘ್ರವೇ ಅವರು ಈ ಪ್ರಕರಣದಲ್ಲಿ ದೋಷಮುಕ್ತರಾಗುವ ವಿಶ್ವಾಸವಿದೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ)ಯ ಅಧ್ಯಕ್ಷರೂ ಆಗಿರುವ ಮ್ಯಾಥ್ಯೂಸ್ ಹೇಳಿದ್ದಾರೆ.