ಮುಂಬೈ: ವಿತ್ತ ರಾಜಧಾನಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ತಮಿಳುನಾಡು ವಿರುದ್ಧದ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ತಂಡ ಇಂದು ಟೀ ವೇಳೆಗೆ ೧೧೨ ರನ್ನುಗಳ ಮುನ್ನಡೆ ಪಡೆದಿದೆ.
ನೆನ್ನೆ ಕರ್ನಾಟಕ ತಂಡದ ನಾಯಕ ವೇಗಿ ವಿನಯ್ ಕುಮಾರ ಅವರ ಬೌಲಿಂಗ್ ದಾಳಿಗೆ ನಲುಗಿದ್ದ ತಮಿಳು ನಾಡು ೧೩೪ ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ನೆನ್ನೆಯೇ ಪ್ರಥಮ ಇನ್ನಿಂಗ್ಸ್ ಪ್ರಾರಂಭಿಸಿದ ಕರ್ನಾಟಕ್ಕೂ ಆಘಾತ ಕಾದಿತ್ತು. ನೆನ್ನೆ ದಿನದ ಅಂತ್ಯಕ್ಕೆ ಕರ್ನಾಟಕ ೪ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸಿತ್ತು.
ಇಂದು ಬೆಳಗ್ಗೆ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ನೆನ್ನೆ ಗಾಯಗೊಂಡು ಹೊರನಡೆದಿದ್ದ ಇನ್ನಿಂಗ್ಸ್ ಆರಂಭಿಸಿದ ಆಟಗಾರ ಕೆ ಎಲ್ ರಾಹುಲ್ ಇಂದು ಆಟ ಮುಂದುವರೆಸಿ ಶತಕ ಹೊಡೆದು ಇನ್ನು ಆಡುತ್ತಾ ಕರ್ನಾಟಕಕ್ಕೆ ಆಸರೆಯಾಗಿದ್ದಾರೆ. ಇವರ ಜೊತೆಗೂಡಿರುವ ಕೆ ಕೆ ನಾಯರ್ ಕೂಡ ೮೮ ರನ್ ಗಳಿಸಿ ರಾಹುಲ್ ಅವರಿಗೆ ಸಾಥ್ ನಿಡಿದ್ದಾರೆ. ಇನ್ನು ಒಂದೂವರೆ ಘಂಟೆಗಳ ಆಟ ಉಳಿದಿದ್ದು ಕರ್ನಾಟಕ ಮಹತ್ವದ ಲೀಡ್ ಗಳಿಸುವ ಸಾಧ್ಯತೆ ಇದೆ.