ಮುಂಬೈ: ಹಾಲಿ ಚಾಂಪಿಯನ್ ಕರ್ನಾಟಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲೂ ಪ್ರಶಸ್ತಿ ಉಳಿಸಿಕೊಳ್ಳುವತ್ತ ಮುಖಮಾಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧ ಫೈನಲ್ ಪಂದ್ಯದ ಎರಡನೇ ದಿನದಾಟದಲ್ಲಿ ಕರ್ನಾಟಕದ ಆಟಗಾರರು ತಮ್ಮ ಬಲವಾದ ಹಿಡಿತ ಸಾಧಿಸುವ ಮೂಲಕ ಟ್ರೋಫಿ ಮೇಲೆ ಒಂದು ಕೈ ಇಟ್ಟಂತಾಗಿದೆ. ಅಂದರೆ, ಮೊದಲ ಇನಿಂಗ್ಸ್ ನಲ್ಲಿ ಹಾಲಿ ಚಾಂಪಿಯನ್ನರು ಭಾರಿ ಮೇಲುಗೈ ಸಾಧಿಸಿದ್ದು, ಒಂದು ವೇಳೆ ಪಂದ್ಯ ಡ್ರಾಗೊಂಡರೂ ಸಹ ಮುನ್ನಡೆಯ ಆಧಾರದ ಮೇಲೆ ಸತತ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಲಿದೆ.
ತಮಿಳುನಾಡಿನ ಮೊದಲ ಇನಿಂಗ್ಸ್ ಮೊತ್ತ 134 ರನ್‍ಗಳಿಗೆ ಉತ್ತರವಾಗಿ ಮೊದಲ ದಿನವೇ ತನ್ನ ಮೊದಲ ಸರದಿ ಆರಂಭಿಸಿದ್ದ ಕರ್ನಾಟಕ ಆಟ ನಿಂತಾಗ 45 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಈ ಮೊತ್ತದೊಂದಿಗೆ ಎರಡನೇ ದಿನದಾಟ ಮುಂದುವರಿಸಿದ ಕರ್ನಾಟಕದ ಮೇಲೆ ಕೊಂಚ ಒತ್ತಡ ಇತ್ತು. ಆದರೆ, ಕೆ.ಎಲ್ ರಾಹುಲ್ (ಅಜೇಯ 131) ಹಾಗೂ ಕರುಣ್ ನಾಯರ್ (ಅಜೇಯ 130) ಅವರ ಜವಾಬ್ದಾರಿಯುತ ಬ್ಯಾಟಿಂಗ್‍ನಿಂದ ಎದುರಾಳಿ ತಮಿಳುನಾಡು ಬೌಲರ್‍ಗಳ ಮೇಲೆ ಸವಾರಿ ನಡೆಸಿ, ದಿನದಾಂತ್ಯಕ್ಕೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಉತ್ತಮ ಸ್ಥಿತಿಗೆ ಬಂದು ನಿಂತಿತ್ತು. ಸೋಮವಾರ ಎರಡನೇ ದಿನ ಕೇವಲ 1 ವಿಕೆಟ್ ಕಳೆದುಕೊಂಡು 278 ರನ್ ದಾಖಲಿಸುವ ಮೂಲಕ ದಿನದ ಪೂರ್ಣ ಗೌರವ ತನ್ನದಾಗಿಸಿಕೊಂಡಿತು. ಈ ಮೂಲಕ ಎರಡನೇ ದಿನದಾಟಕ್ಕೆ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 323 ರನ್ ದಾಖಲಿಸಿದ್ದು, ಸದ್ಯ ಮೊದಲ ಇನಿಂಗ್ಸ್ 189 ರನ್‍ಗಳ ಮುನ್ನಡೆ ಸಂಪಾದಿಸಿದೆ.
ಮಿಥುನ್ ಉತ್ತಮ ಆರಂಭ: ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಲು ಉಳಿದ 89 ರನ್‍ಗಳ ಅಗತ್ಯದೊಂದಿಗೆ ಕರುಣ್ ನಾಯರ್ ಹಾಗೂ ನೈಟ್ ವಾಚ್‍ಮನ್ ಅಭಿಮನ್ಯು ಮಿಥುನ್ ಎರಡನೇ ದಿನದಾಟ ಆರಂಭಿಸಿದರು. ತಮಿಳುನಾಡು ಬೌಲರ್ ಗಳ ವಿರುದ್ಧ ಆರಂಭದಲ್ಲೇ ಅಬ್ಬರಿಸಿದ ಮಿಥುನ್ ಅತ್ಯಮೂಲ್ಯ 39 ರನ್‍ಗಳ ಕಾಣಿಕೆ ನೀಡಿದರು. 5ನೇ ವಿಕೆಟ್‍ಗೆ ಈ ಇಬ್ಬರು 53 ರನ್‍ಗಳ ಜತೆಯಾಟ ನೀಡುವ ಮೂಲಕ ತಂಡದಲ್ಲಿ ಸ್ವಲ್ಪ ಆತ್ಮ ವಿಶ್ವಾಸ ಹೆಚ್ಚಿಸಿತು.
ದ್ವಿಶತಕದ ಜತೆಯಾಟ: ಮಿಥುನ್ ವಿಕೆಟ್ ಬಿದ್ದ ನಂತರ ಕಣಕ್ಕಿಳಿದ ಕೆ.ಎಲ್ ರಾಹುಲ್, ಕರುಣ್ ನಾಯರ್ ಜತೆಗೂಡಿ ದಿನಪೂರ್ತಿ ನಿರಾಯಾಸವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಮಿಳುನಾಡು ಬೌಲರ್‍ಗಳಿಗೆ ಕಂಟಕಪ್ರಾಯವಾದರು. ಕರುಣ್ ಹಾಗೂ ರಾಹುಲ್ ಮುರಿಯದ 6ನೇ ವಿಕೆಟ್‍ಗೆ 239 ರನ್ ಕಲೆಹಾಕಿದ್ದಾರೆ. ಈ ಮೂಲಕ ತಂಡ ಉತ್ತಮ ಮುನ್ನಡೆ ಸಾಧಿಸಿದ್ದು, ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಮೊದಲ ದಿನ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್‍ಗೆ ಇಳಿದಿದ್ದ ಕೆ.ಎಲ್ ರಾಹುಲ್ ಮಂಡಿ ನೋವಿನಿಂದ ಹೊರ ನಡೆದಿದ್ದರು. ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ ಮತ್ತೆ ಕಣಕ್ಕಿಳಿದ ರಾಹುಲ್ ನೋವಿನ ನಡುವೆಯೂ ಗಮನಾರ್ಹ ಪ್ರದರ್ಶನ ನೀಡಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು.
ತಮಿಳುನಾಡಿನ ಅನನುಭವಿ ಬೌಲಿಂಗ್ ದಾಳಿಯನ್ನು ಹೆಚ್ಚು ತೊಂದರೆ ಇಲ್ಲದೇ ಚೆಂಡಾಡಿದ ರಾಹುಲ್ ಶತಕ ಪೂರೈಸಿದರು. ತಾಳ್ಮೆಯ ಬ್ಯಾಟಿಂಗ್ ಮೂಲಕ ಶತಕ ದಾಖಲಿಸಿದ ರಾಹುಲ್ ಸತತ ಎರಡು ರಣಜಿ ಋತುವಿನ ಫೈನಲ್ ಪಂದ್ಯದಲ್ಲಿ ಶತಕ ದಾಖಲಿಸಿದ ಕೀರ್ತಿಗೆ ಪಾತ್ರರಾದರು. ಇನ್ನು ಪ್ರಸಕ್ತ ರಣಜಿ ಟೂರ್ನಿಯಲ್ಲಿ ಉತ್ತಮ ರೀತಿಯಲ್ಲಿ ರನ್ ಗಳಿಸಲು ವಿಫಲರಾಗಿದ್ದ ಕರುಣ್ ನಾಯರ್, ಮಹತ್ವದ ಪಂದ್ಯದಲ್ಲಿ ತಂಡಕ್ಕೆ ಅಗತ್ಯ ಸಮಯದಲ್ಲಿ ಶತಕಗಳಿಸಿ ತಮ್ಮ ಅತ್ಯಮೂಲ್ಯ ಕಾಣಿಕೆ ನೀಡುವ ಮೂಲಕ ಎಲ್ಲರ ಮನ ಗೆದ್ದರು. ಅಲ್ಲದೆ ಈ ಟೂರ್ನಿಯಲ್ಲಿ ಎದುರಿಸಿದ್ದ ರನ್ ಬರವನ್ನು ನೀಗಿಸಿಕೊಂಡಿದ್ದಾರೆ. ರಾಹುಲ್ ಅವರೊಂದಿಗೆ ಕರುಣ್ ಇನಿಂಗ್ಸ್ ಕಟ್ಟಿದ ರೀತಿ ಗಮನಾರ್ಹವಾಗಿತ್ತು. ಚೆಂಡನ್ನು ಬೌಂಡರಿವರೆಗೂ ಹೊಡೆದರೂ ಕೇವಲ ಒಂದು ರನ್ ಸಂಪಾದಿಸುವಾಗಲೂ ತಮ್ಮ ನಿರಾಸೆಯನ್ನು ಬದಿಗಿಟ್ಟು ತಾಳ್ಮೆ ಆಟ ಪ್ರದರ್ಶಿಸಿದರು.
ಇನ್ನೂ ಮೂರು ದಿನಗಳ ಆಟ ಉಳಿದಿದೆ. ರಾಹುಲ್ ಹಾಗೂ ಕರುಣ್ ಇಬ್ಬರೂ ಮೂರನೇ ದಿನಕ್ಕೆ ತಮ್ಮ ಆಟವನ್ನು ಕಾಯ್ದಿರಿಸಿದ್ದು, ಕರ್ನಾಟಕ ಯಾವುದೇ ಆತುರ ಪಡದೆ ನಿರಾಯಾಸವಾಗಿ ಬೃಹತ್ ಮುನ್ನಡೆಯನ್ನು ಗಳಿಸುವತ್ತ ಗಮನ ಹರಿಸುವ ಅಗತ್ಯವಿದೆ. ಮತ್ತೊಂದೆಡೆ ಎರಡನೇ ದಿನ ಪೂರ್ತಿ ಬೆವರು ಸುರಿಸಿದರೂ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತವಾದ ತಮಿಳುನಾಡು ತಂಡದ ಸ್ಥಿತಿ ಸದ್ಯ ಶೋಚನೀಯವಾಗಿದೆ. ತಮಿಳುನಾಡು ತಂಡದ ನಾಯಕ ಅಭಿನವ್ ಮುಕುಂದ್ ಎಂಟು ಮಂದಿ ಬೌಲರ್‍ಗಳನ್ನು ಪ್ರಯೋಗಿಸಿದರೂ ರಾಹುಲ್ ಮತ್ತು ಕರುಣ್‍ರ ಗಟ್ಟಿ ಜೋಡಿಯನ್ನು ಬೇರ್ಪಡಿಸಲಾಗದೇ ಭಾರಿ ನಿರಾಸೆಗೊಂಡರು.