ಟೀಂ ಇಂಡಿಯಾಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವರವಾಗಿ ಪರಿಣಮಿಸಿದೆ. 2011ರ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ ಸೇರಿದಂತೆ ಅನೇಕ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಅವರ ಹೆಸರಿಗೆ ಮತ್ತೊಂದು ದಾಖಲೆ ಮುಡಿಗೇರಿದೆ.
2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಕ್ವಾಟರ್ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಪಂದ್ಯದಲ್ಲಿ 100 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದು, ಮೂರನೇ ಸ್ಥಾನಕ್ಕೇರಿದ್ದಾರೆ.
174 ಪಂದ್ಯಗಳಲ್ಲಿ 90 ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಖ್ಯಾತಿಗೆ ಇದಕ್ಕೂ ಮುನ್ನ ಭಾರತ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪಾತ್ರರಾಗಿದ್ದರು.
ಧೋನಿ 2007ರಲ್ಲಿ ಭಾರತದ ನಾಯಕನಾಗಿ ಆಯ್ಕೆಗೊಂಡಿದ್ದು, ಅಲ್ಲಿಂದ ತಮ್ಮ ವಿಜಯದ ಪತಾಕೆಯನ್ನು ಹಾರಿಸುತ್ತಾ ಬಂದಿದ್ದಾರೆ. 2007ರ ಟ್ವಿ-20 ವಿಶ್ವಕಪ್, 2011 ವಿಶ್ವಕಪ್ ಬಳಿಕ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ.
ತಮ್ಮ ನಾಯಕತ್ವದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪಾತ್ರರಾಗಿದ್ದಾರೆ.
* ರಿಕಿ ಪಾಂಟಿಂಗ್ ನಾಯಕತ್ವದಲ್ಲಿ 230 ಪಂದ್ಯಗಳ ಪೈಕಿ 165 ಪಂದ್ಯಗಳಲ್ಲಿ ಗೆಲುವು
* ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬೋರ್ಡರ್ 178 ಪಂದ್ಯ 107 ಗೆಲುವು
* ಟೀಂ ಇಂಡಿಯಾ ನಾಯಕ ಧೋನಿ 177 ಪಂದ್ಯ 100 ಗೆಲುವು
* ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ 138 ಪಂದ್ಯ 99 ಗೆಲುವು
* ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಪ್ಲೆಮಿಂಗ್ 218 ಪಂದ್ಯ 98 ಗೆಲುವು