ಸಿಡ್ನಿ: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ನೇರ ಹಣಾಹಣಿ ನಡೆಯಲಿದ್ದು, ಟೀಂ ಇಂಡಿಯಾ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ವಾಗ್ದಾಳಿ ನಡೆಸಿದೆ.
ವಿಶ್ವಕಪ್‌ಗಿಂತ ಮುಂಚಿನ ತ್ರಿಕೋನ ಸರಣಿಯಲ್ಲಿ ಟೀಂ ಇಂಡಿಯಾ ನಮ್ಮ ವಿರುದ್ಧ ಒಂದೇ ಒಂದು ಪಂದ್ಯದಲ್ಲೂ ಜಯಗಳಿಸಿಲ್ಲ. ವಿಶ್ವಕಪ್ ಸೆಮಿಫೈನಲ್ ನಲ್ಲೂ ಅದೇ ಮುಂದುವರೆಯುತ್ತದೆ ಎಂದು ಆಸ್ಟ್ರೇಲಿಯಾದ ತಂಡದ ಬ್ಯಾಟ್ಸ್‌ಮೆನ್ ಗ್ಲೆನ್ ಮ್ಯಾಕ್ಸ್‌ವೆಲ್ ಲೇವಡಿ ಮಾಡಿದ್ದಾರೆ.
ಆಸ್ಟ್ರೇಲಿಯಾ ತಂಡ ಪ್ರಬಲ ಭಾರತ ತಂಡವನ್ನು ಹೇಗೆ ನಿಯಂತ್ರಿಸಲಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ತಂಡ ನಮ್ಮ ವಿರುದ್ಧ ಯಾವುದೇ ಪಂದ್ಯದಲ್ಲಿ ಜಯಗಳಿಸಿಲ್ಲ. ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಜಯಗಳಿಸಿದ್ದೇವೆ ಎಂದಿದ್ದಾರೆ. ಅಲ್ಲದೆ ಎದುರಾಳಿ ಭಾರತ ತಂಡಕ್ಕೆ ನೆನಪಿನ ಶಕ್ತಿಯಿದೆ ಎಂದು ಭಾವಿಸುವುದಾಗಿ ವ್ಯಂಗ್ಯವಾಡಿದ್ದಾರೆ.
ಆದರೆ, ಭಾರತ ಪ್ರಬಲ ತಂಡವಾಗಿದ್ದರಿಂದಲೇ ಸೆಮಿಫೈನಲ್ ಹಂತಕ್ಕೆ ತಲುಪಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೊಗಳಿದ್ದಾರೆ. ಭಾರತ ತಂಡದ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲಲು ಹರಸಾಹಸ ಪಡಬೇಕಾಗುತ್ತದೆ ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಮಾರ್ಚ್ 26 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಮುಖಾಮುಖಿಯಾಗಲಿವೆ.