ವೆಲ್ಲಿಂಗ್ಟನ್: ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಇನ್ನು ಆರಂಭಿಕ ಕ್ರಿಸ್ ಗೇಯ್ಲ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಇಂಗ್ಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನ. ಈ ಪರಿಸ್ಥಿತಿಯಲ್ಲೂ ಸದ್ಯಕ್ಕೆ ಯಾವುದೇ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಹೇಳುವುದಿಲ್ಲ ಎಂದು ಗೇಯ್ಲ್ ಸ್ಪಷ್ಟಪಡಿಸಿದ್ದಾರೆ. `ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ಪರ ಆಡಬೇಕು. ಅದರಲ್ಲಿ ಅನುಮಾನವಿಲ್ಲ. ಗಾಯದ ಸಮಸ್ಯೆಗಳು ನನ್ನನ್ನು ಕಾಡುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವತ್ತ ಗಮನ ಹರಿಸಿದ್ದೇನೆ. ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಚೇತರಿಕೆಯ ನಂತರ ಮತ್ತೆ ವಿಂಡೀಸ್ ತಂಡಕ್ಕೆ ಮರಳುತ್ತೇನೆ. ಬೆನ್ನು ನೋವಿನಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಅಲಭ್ಯನಾಗಿದ್ದೇನೆ. ಹಾಗೆಂದು ಈ ಮಾದರಿಯಿಂದ ನಿವೃತ್ತಿ ಪಡೆಯುವುದಿಲ್ಲ. ನನ್ನ ಆರೋಗ್ಯ ದ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡುತ್ತೇನೆ' ಎಂದು ತಿಳಿಸಿದ್ದಾರೆ.