ಸಿಡ್ನಿ: ಸಿಡ್ನಿಯಲ್ಲಿ ಗುರುವಾರ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಸೋತಿರಬಹುದು. ಆದರೆ ಅದು ತನ್ನೊಂದಿಗೆ ಹಲವು ದಾಖಲೆಗಳನ್ನು ಮತ್ತು ಅತ್ಯಮೂಲ್ಯ ನೆನಪಿನ ಬುತ್ತಿಗಳನ್ನು ಹೊತ್ತು ಭಾರತಕ್ಕೆ ಬರುತ್ತಿದೆ ಎಂಬುದನ್ನು ಮರೆಯಬಾರದು.
ಇಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯದ ಬಳಿಕ ಸೋತ ಭಾರತ ತಂಡದ ವಿರುದ್ಧ ಭಾರತದಲ್ಲಿ ಸಾಕಷ್ಟು ವಿರೋಧ, ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಕ್ರೀಡಾ ಪ್ರೇಮಿಗಳು ಒಂದನ್ನು ಮರೆಯಬಾರದು. ಸೆಮೀಸ್ ನಲ್ಲಿ ಭಾರತ ಸೋಲು ಕಂಡಿರಬಹುದು. ಆದರೆ ಪ್ರಸಕ್ತ ಸಾಲಿನ ವಿಶ್ವಕಪ್ ನಲ್ಲಿ ಘಾಟಾನುಘಟಿ ತಂಡಗಳಿಗೆ ನೀರು ಕುಡಿಸಿದೆ. ಇತಿಹಾಸದಲ್ಲಿ ಅಸಾಧ್ಯ ಎಂದು ದಾಖಲಾಗಿದ್ದ ಪಂದ್ಯಗಳನ್ನು ಕೂಡ ಭಾರತ ತಂಡ ಗೆದ್ದು ನವ ಇತಿಹಾಸವನ್ನು ನಿರ್ಮಿಸಿದೆ. ಪಂದ್ಯಗೆದ್ದರೆ ಮಾತ್ರ ಅವರು ಚಾಂಪಿಯನ್ಸ್ ಗಳಲ್ಲ. ಅಭಿಮಾನಿಗಳ ಹೃದಯ ಗೆಲ್ಲಬೇಕು. ಈ ವಿಷಯದಲ್ಲಿ ಟೀಂ ಇಂಡಿಯಾ ಯಾವಾಗಲೂ ಚಾಂಪಿಯನ್.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ಕ್ರಿಕೆಟ್ ವಿಶ್ವಕಪ್ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನ ಯಾರೂ ಕೂಡ ಈ ತಂಡ ಸೆಮಿಫೈನಲ್ ಗೇರುತ್ತದೆ ಎಂದು ಭಾವಿಸಿರಲಿಲ್ಲ. ಅದಕ್ಕೆ ಕಾರಣ ವಿಶ್ವಕಪ್ ಮೊದಲು ನಡೆದ ಟೆಸ್ಟ್ ಸರಣಿ ಮತ್ತು ತ್ರಿಕೋನ ಏಕದಿನ ಸರಣಿಯಲ್ಲಿನ ಹೀನಾಯ ಸೋಲು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಟೀಂ ಇಂಡಿಯಾ ಅತ್ಯಂತ ಕಳಪೆ ಫಾರ್ಮ್ ನಿಂದ ಬಳಲುತ್ತಿತ್ತು. ಆದರೆ ವಿಶ್ವಕಪ್ ಸರಣಿಯಲ್ಲಿ ಗೆಲ್ಲಬೇಕು ಎಂಬ ಅದರ ಹಠ ಅದನ್ನು ಮತ್ತೆ ಫೀನಿಕ್ಸ್ ಎದ್ದುಬರುವಂತೆ ಮಾಡಿತು.
ಸರಣಿ ಆರಂಭವಾದಾಗಿನಿಂದ ಹಿಡಿದು ಇಂದು ಮುಕ್ತಾಯಗೊಂಡ ಸೆಮಿಫೈನಲ್ ವರೆಗೂ ಭಾರತ ತಂಡ ಎಲ್ಲಿಯೂ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ. ಪ್ರಮುಖವಾಗಿ ಪಾಕಿಸ್ತಾನ ಮತ್ತು ದಕ್ಷಿಣ ಆಪ್ರಿಕಾ ತಂಡಗಳ ವಿರುದ್ಧ ನಡೆದ ಪಂದ್ಯಗಳಲ್ಲಿ ಭಾರತ ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದಲೇ ಆಡಿ ಆ ಐತಿಹಾಸಿಕ ಪಂದ್ಯಗಳನ್ನು ಗೆದ್ದುಕೊಂಡಿತು. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿರುವ ಮೈದಾನಗಳಲ್ಲಿ ಭಾರತೀಯ ಬೌಲರ್ ಗಳ ಸಾಧನೆ ಕಡಿಮೆ ಏನಿಲ್ಲ. ವೇಗದ ಬೌಲರ್ ಗಳಿಗೆ ಸಹಕಾರಿಯಾಗುವ ಈ ಪಿಚ್ ಗಳಲ್ಲಿ ಅಷ್ಟೇನೂ ಅನುಭವಿಲ್ಲದ ಭಾರತೀಯ ಬೌಲರ್ ಗಳು ಸತತ 7 ಪಂದ್ಯಗಳಲ್ಲಿ 70 ವಿಕೆಟ್ ಪಡೆದಿದ್ದಾರೆ. ಇದು ಅವರ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನು ವಿಶ್ವಕಪ್ ಸರಣಿಯಲ್ಲಿ ಸತತ ಗೆಲುವು ದಾಖಲಿಸುವುದು ಕೂಡ ಕಷ್ಟಸಾಧ್ಯ. ಅಂತಹುದರಲ್ಲಿ ಭಾರತ ತಂಡ ಪ್ರಸಕ್ತ ವಿಶ್ವಕಪ್ ನಲ್ಲಿ ಸತತ 7 ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವಕ್ಕೇ ಪರಿಚಯಿಸಿದೆ. ಇನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಈ ಬಾರಿ ಭಾರತ ತಂಡವನ್ನು ಶತಾಯಾಗತಾಯ ಮಣಿಸಿಯೇ ತೀರುತ್ತೇವೆ ಎಂದು ಆಹಂನಿಂದಲೇ ಮೈದಾನಕ್ಕಿಳಿದು ಅವಮಾನ ಅನುಭವಿಸಿತು. ಭಾರತ ಹೊಂದಿದ್ದ ಅಜೇಯ ದಾಖಲೆಯನ್ನು ಮುರಿಯಲೆತ್ನಿಸಿದ ಪಾಕಿಸ್ತಾನವನ್ನು ಭಾರತ ತಂಡದ ಆಟಗಾರರು ಒಗ್ಗೂಡಿ ಸದೆಬಡಿದರು. ಆ ಮೂಲಕ ಪಾಕಿಸ್ತಾನದ ವಿರುದ್ಧ ಇದ್ದ ದಾಖಲೆಯನ್ನು ಮುಂದುವರೆಸಿದ್ದಾರೆ.
ಇನ್ನು ಈ ವಿಶ್ವಕಪ್ ನಲ್ಲಿ ಭಾರತ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತ ತಂಡದ ವಿರುದ್ಧ ಪಾಕಿಸ್ತಾನ ಎದುರಿಸುತ್ತಿರುವ ಗೆಲುವಿನ ಬರವನ್ನು, ಭಾರತ ತಂಡ ಕೂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಎದುರಿಸುತ್ತಿತ್ತು. ಆದರೆ ಈ ಬಾರಿ ಭಾರತ ತಂಡ ಸಂಘಟಿತ ಹೋರಾಟ ಆ ಬರವನ್ನು ನೀಗಿಸಿಕೊಂಡಿದೆ. ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 130 ರನ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಬಹು ವರ್ಷಗಳ ತನ್ನ ಕನಸನ್ನು ಸಾಕಾರ ಮಾಡಿಕೊಂಡಿತು.
ಇಷ್ಟೆಲ್ಲಾ ಸಾಧನೆ ಮಾಡಿ ಅಭಿಮಾನಿಗಳಿಗೆ ವಿಶೇಷ ನೆನಪಿನ ಬುತ್ತಿ ನೀಡಿರುವ ಟೀಂ ಇಂಡಿಯಾ ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಚಾಂಪಿಯನ್ಸ್ ಗಳಾಗಿದ್ದಾರೆ.
- ಶ್ರೀನಿವಾಸ ಮೂರ್ತಿ